ರೋಣ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅವರ ಆದರ್ಶ, ಜೀವನ ಶೈಲಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು. ಈ ದಿಶೆಯಲ್ಲಿ ರಾಯಣ್ಣ ಪ್ರತಿಷ್ಠಾನ ಗಜೇಂದ್ರಗಡದಿಂದ ಜ. 26 ರಂದು ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ರೋಣ ಪಟ್ಟಣದಲ್ಲಿ ರಾಯಣ್ಣ ಗೌರವ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಗಜೇಂದ್ರಗಡದಿಂದ ಪ್ರಚಾರ ಸಾಮಗ್ರಿ, ಬಿತ್ತಿಪತ್ರ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ಕಳೆದ 15 ವರ್ಷಗಳಿಂದ 1 ಬಾರಿ ಬೆಂಗಳೂರಲ್ಲಿ ಹಾಗೂ ಉಳಿದಂತೆ ಗಜೇಂದಗಡ ಭಾಗದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜನೆ ಮಾಡುತ್ತ ಬಂದಿರುವುದು ಶ್ಲಾಘನೀಯ. ಈ ಬಾರಿ ರೋಣದಲ್ಲಿ ಆಯೋಜಿಸುವಂತೆ ರಾಯಣ್ಣ ಪ್ರತಿಷ್ಠಾನ ಅಧ್ಯಕ್ಷ ಎಚ್.ಎಸ್.ಸೊಂಪೂರ ಅವರಲ್ಲಿ ವಿನಂತಿಸಿಕೊಂಡಾಗ ರೋಣದಲ್ಲಿ ಆಯೋಜಿಸಲು ಒಪ್ಪಿದರು. ಜ.26 ರಂದು ಸಂಗೊಳ್ಳಿ ರಾಯಣ್ಣನವರ 194ನೇ ಹುತಾತ್ಮ ದಿನದ ಅಂಗವಾಗಿ ರಾಯಣ್ಣ ಗೌರವ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಪಟ್ಟಣದ ಹೊಸ ಸಂತೆ ಬಜಾರದಲ್ಲಿ ಅದ್ಧೂರಿಯಾಗಿ ಆಯೋಜನೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಸೊಂಪುರ ಮಾತನಾಡಿ, ಬ್ರಿಟಿಷರಿಂದ ತಾಯಿ ನೆಲದ ರಕ್ಷಣೆಗಾಗಿ ಪ್ರಾಣ ಲೆಕ್ಕಿಸದೇ ಹೋರಾಡಿದ ಸ್ವಾತಂತ್ರ್ಯ ವೀರ ಸೆನಾನಿ ಸಂಗೊಳ್ಳಿ ರಾಯಣ್ಣ ದೇಶವನ್ನು ಮೆಚ್ಚವಂತ ಕಾಯಕ ಮಾಡಿದ್ದಾರೆ. ರಾಯಣ್ಣ ಸಾಧನೆಗಾಗಿ ದೆಹಲಿ ಸಂಸತ್ ಎದುರು ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಬೇಕು. ರಾಯಣ್ಣನ ಹೋರಾಟ ದೇಶಕ್ಕೆ ತಿಳಿಯಬೇಕು. ಈ ದಿಶೆಯಲ್ಲಿ ದೆಹಲಿಯಲ್ಲಿ ರಾಯಣ್ಣ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳುವ ಆಶಯವಿದೆ. ಈ ಬಾರಿ ಜ. 26 ರಂದು ಸಂಜೆ 4ಕ್ಕೆ ಸಂತೆ ಬಜಾರದಲ್ಲಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ರಾಯಣ್ಣ ಗೌರ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮಿಗಳು, ಧಾರವಾಡ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು, ಗಜೇಂದ್ರಗಡದ ಹಜರತ್ ಸೈಯದ್ ನಿಜಾಮುದ್ದಿನ ಷಾ ಅರ್ಷಪಿ ಟಕ್ಕೇದ ವಹಿಸಿಕೊಳ್ಳಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಲಕ್ಷ್ಮಣ ಸವದಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಜಿ.ಎಸ್. ಪಾಟೀಲ ವಹಿಸಿಕೊಳ್ಳಲಿದ್ದು, ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮ ಕಾನೂನು ಸಂಸದೀಯ ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನಡೆಸಲಿದ್ದು, ರಾಣಿ ಚೆನ್ನಮ್ಮ ಭಾವಚಿತ್ರದ ಅನಾವರಣವನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ ನೆರವೇರಿಸುವರು. ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ಮಾಜಿ ಶಾಸಕಿ ಕುಸುಮಾ ಶಿವಳ್ಳಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ವಿ.ಆರ್. ಗುಡಿಸಾಗರ, ಹಾಲುಮತ ಸಮಾಜದ ರೋಣ ತಾಲೂಕಾಧ್ಯಕ್ಷ ಬಸವರಾಜ ಜಗ್ಗಲ, ಮಿಥುನ.ಜಿ.ಪಾಟೀಲ, ಬಸವರಾಜ ನವಲಗುಂದ, ತಿಪ್ಪಣ್ಣ ಕುರಿ, ವಿ.ಬಿ. ಸೋಮನಕಟ್ಟಿಮಠ, ಯೂಸೂಫ್ ಇಟಗಿ, ಎಂ.ಎಂ. ಕೆಸರಿ, ಬಸವರಾಜ ಯರಗೊಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.