ಕನ್ನಡಪ್ರಭ ವಾರ್ತೆ ಮಂತ್ರಾಲಯರಘು ಭಟ್ ನಿರ್ದೇಶನದಲ್ಲಿ ಮಂತ್ರಾಲಯದ ಕುರಿತಾಗಿ ಮೂಡಿಬಂದಿರುವ ‘ರಾಯರ ದರ್ಶನ’ ಆಲ್ಬಂ ಹಾಡನ್ನು ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದ್ದಾರೆ.
ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಮಾತನಾಡಿ, ‘20 ವರ್ಷಗಳ ಕೆಳಗೆ ಮಂತ್ರಾಲಯಕ್ಕೆ ಬಂದಿದ್ದಾಗ ಅದು ಈ ಮಟ್ಟಿಗೆ ಬೆಳೆಯಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಾಶಿಯನ್ನು ಸರಿಗಟ್ಟುವಂತೆ ಕ್ಷೇತ್ರವು ಅಭಿವೃದ್ಧಿ ಸಾಧಿಸುತ್ತಿದೆ. ಇದರ ಹಿಂದಿರುವುದು ಸುಭುದೇಂದ್ರ ತೀರ್ಥರ ಕನಸು ಮತ್ತು ಪರಿಶ್ರಮ. ನಮಗೆಲ್ಲ ರಾಘವೇಂದ್ರ ಸ್ವಾಮಿಗಳು ಹತ್ತಿರವಾದದ್ದು ಡಾ. ರಾಜ್‌ಕುಮಾರ್ ಗೀತೆಗಳ ಮೂಲಕ. ಇದೀಗ ಮತ್ತೆ ರಾಘವೇಂದ್ರ ಸ್ವಾಮಿಗಳನ್ನು ಜನಮಾನಸಕ್ಕೆ ಮತ್ತಷ್ಟು ಹತ್ತಿರವಾಗಿಸುವ ಆಲ್ಬಂ ‘ರಾಯರ ದರ್ಶನ’ ಬಿಡುಗಡೆಯಾಗಿರುವುದು ಸುಯೋಗ. ಈ ಆಲ್ಬಂ ಸಹ ಡಾ. ರಾಜ್ ಅವರ ಆಲ್ಬಂನಂತೆಯೇ ಪ್ರಸಿದ್ಧವಾಗಲಿ’ ಎಂದು ಶುಭ ಹಾರೈಸಿದರು.
ನಿರ್ದೇಶಕ ರಘು ಭಟ್, ‘ಸುಭುದೇಂದ್ರ ತೀರ್ಥರು ಪೂರ್ವಾಶ್ರಮದಲ್ಲಿ ಪತ್ರಕರ್ತರಾಗಿದ್ದ ಕಾರಣ ನಮ್ಮ ಟಿಎನ್ಐಟಿ ಮೀಡಿಯಾ ಅವಾರ್ಡ್ ಅನ್ನು ಈ ಬಾರಿ ಅವರಿಗೇ ನೀಡಿ ಗೌರವಿಸಲಾಗುವುದು. ಇದೀಗ ಬಿಡುಗಡೆಯಾದ ಆಲ್ಬಂ ಹಾಡನ್ನು ಕಳೆದ ಎಂಟು ತಿಂಗಳಿಂದ ಶ್ರಮ ಪಟ್ಟು ಮಾಡಲಾಗಿದೆ. ನೈಜತೆಗೆ ಹತ್ತಿರವಾಗಿ ಚಿತ್ರೀಕರಣ ಮಾಡಿದ್ದೇವೆ. ನನಗೆ ತಿಳಿದ ಹಾಗೆ ದೇಶದಲ್ಲಿ ಮಠದ ಕುರಿತಾಗಿ ಸಮಗ್ರವಾದ ವಿಡಿಯೋ ಸಾಂಗ್ ಮಾಡಿದ ದಾಖಲೆಗಳಿಲ್ಲ. ಒಂದು ವರ್ಷದಲ್ಲಿ ಮಂತ್ರಾಲಯದಲ್ಲಿ ಏನೆಲ್ಲಾ ಕಾರ್ಯಕ್ರಮ ನಡೆಯುತ್ತವೆ ಎಂಬುದನ್ನು ಹಾಡಿನಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ರಾಯರ ಭಕ್ತನಾಗಿ ಇದನ್ನು ಮಾಡಿದ್ದೇನೆ ’ ಎಂದರು.ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್ ಈ ಹಾಡು ನೋಡಬಹುದು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದ್ದು, ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ಬ್ರಹ್ಮಕಲಶ ಹಾಡು ಹಾಡಿದ ಅಬ್ಬಿ ವಿ. ಈ ಹಾಡನ್ನು ಹಾಡಿದ್ದಾರೆ.