ಕನ್ನಡಪ್ರಭ ವಾರ್ತೆ ಬೆಂಗಳೂರು

ಮೋಹರಂ ಸೇರಿದಂತೆ ವಾರಾಂತ್ಯ ರಜೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸಿತಾಣಗಳಲ್ಲಿ ಜನಸಾಗರ ಹರಿದು ಬಂದಿದ್ದು, ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಆಗಿ ಪರದಾಡುವಂತಾಯಿತು.

ಉಡುಪಿಯಲ್ಲಿ ಶನಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಕೃಷ್ಣ ಮಠಕ್ಕೆ ತೆರಳುವ ಕಿರಿದಾದ ರಸ್ತೆಯಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತಿರುವುದು ಕಂಡುಬಂತು. ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಮಠದ ಆಸುಪಾಸು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಕೃಷ್ಣಮಠದಲ್ಲಿ ಭಕ್ತರ ಸರದಿ ಸಾಲು ಎಂದಿಗಿಂತ ದೊಡ್ಡದಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತಕ್ಕೆ ಶನಿವಾರ 40 ಸಾವಿರಕ್ಕೂ ಹೆಚ್ಚು ಭಕ್ತರ ಆಗಮಿಸಿದ್ದರು. ಶುಕ್ರವಾರ ಹಾಗೂ ಶನಿವಾರ ದೇವಳದ ಎಲ್ಲ ವಸತಿಗೃಹಗಳು ತುಂಬಿದ್ದು, ಖಾಸಗಿ ವಸತಿ ಕೊಠಡಿಗಳು ಭರ್ತಿಯಾಗಿ ಭಕ್ತರು ದೇವಳದ ರಥ ಬೀದಿ ಸಭಾಂಗಣದಲ್ಲಿ ವಾಸ್ತವ್ಯ ಪಡೆದಿದ್ದರು. ಕ್ಷೇತ್ರದ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಬರ್ತಿಯಾಗಿದ್ದು, ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು.

ಚಿಕ್ಕಮಗಳೂರಿನ ಪ್ರವಾಸೋದ್ಯಮ ಇಲಾಖೆ ಅಧಿಕಾರಿ, ಸಿಬ್ಬಂದಿ ಆನ್‌ಲೈನ್‌ ಬುಕ್ಕಿಂಗ್‌ ನಿಯಮವನ್ನೇ ಗಾಳಿಗೆ ತೂರಿದ ಪರಿಣಾಮ ಶನಿವಾರ ಲಕ್ಷಾಂತರ ಮಂದಿ ಪ್ರವಾಸಿಗರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನ ಕಿರಿದಾದ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಪರದಾಡಬೇಕಾಯಿತು. ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಕಾರುಗಳು ಆಗಮಿಸಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಪಂಡರವಳ್ಳಿ ಹಾಗೂ ಸೀತಾಳಯ್ಯನಗಿರಿ ಭಾಗದಲ್ಲಿ ವಾಹನಗಳು ಸ್ತಬ್ಧಗೊಂಡಿದ್ದವು. ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳೀಯ ಪೊಲೀಸರು ಹಾಗೂ ಚೆಕ್‌ ಪೋಸ್ಟ್ ಸಿಬ್ಬಂದಿ ಹರಸಾಹಸಪಟ್ಟರು. ಕೈಮರ ಚೆಕ್‌ ಪೋಸ್ಟ್‌ನಿಂದ ಸುಮಾರು 5 ಕಿ.ಮೀ ಉದ್ದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ದೂರ ಊರುಗಳಿಂದ ಆಗಮಿಸಿದ ಪ್ರವಾಸಿಗರು ಟ್ರಾಫಿಕ್‌ ಜಾಮ್‌ ನೋಡಿ ಬೇಸರಿಂದ ವಾಪಾಸ್ ಹೋಗುವ ದೃಶ್ಯ ಸಹ ಕಂಡು ಬಂದವು.ಆಗುಂಬೆ ಘಾಟಿಗೆ ಭಾರಿ ವಾಹನ ಸಂಚಾರ ನಿಷೇಧ:


ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಸಂಚಾರದಿಂದ ಅಲ್ಲಲ್ಲಿ ಭೂ ಕುಸಿತ ಸಂಭವ ಹಿನ್ನೆಲೆಯಲ್ಲಿ ಸೆ.30ರವರೆಗೆ ಈ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.