ಆರ್‌ಬಿಐ ಮಾರ್ಗಸೂಚಿ ಕಡ್ಡಾಯ ಪಾಲಿಸಿ: ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಸೂಚನೆ

KannadaprabhaNewsNetwork | Published : Jan 30, 2025 12:31 AM

ಸಾರಾಂಶ

ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಖಾಸಗಿ ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್‌ಬಿಐ ಮಾರ್ಗಸೂಚಿ ಪ್ರಕಾರ 2 ಲಕ್ಷ ರು.ವರೆಗೆ ಮಾತ್ರ ಸಾಲ ನೀಡಬಹುದಾಗಿದೆ. ಆದರೆ ಸಾಲ ನೀಡುವಾಗ ಸಾಲ ಪಡೆಯುವವರು ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದೆಯೇ ಎಂದು ಗಮನಿಸಿ ಸಾಲವನ್ನು ನೀಡಬೇಕು. ಅದನ್ನು ಬಿಟ್ಟು ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸುವುದು ಎಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ತಾವೂ ಸಹ (ಪೈನಾನ್ಸ್ ಕಂಪನಿಗಳು) ಕಾನೂನು ನಿಯಮಾನುಸಾರ ನಡೆದುಕೊಳ್ಳಬೇಕು. ಅದು ಬಿಟ್ಟು ದೌರ್ಜನ್ಯ ನಡೆಯುವುದು ಕಂಡುಬಂದರೆ ನಿಯಮಾನುಸಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಪ್ರತಿಯೊಬ್ಬರಲ್ಲಿಯೂ ಆರ್ಥಿಕ ಶಿಸ್ತು ಇರಬೇಕು. ಅದನ್ನು ಬಿಟ್ಟು ಹೆಚ್ಚುವರಿ ಸಾಲ ನೀಡುವುದು, 5 ಗಂಟೆಯ ನಂತರ ಸಾಲ ವಸೂಲಾತಿ ಮಾಡಲು ಹೋಗುವುದು ಇಂತಹ ಪ್ರಕರಣಗಳು ವರದಿಯಾಗಬಾರದು. ಎಲ್ಲರ ರಕ್ಷಣೆ ಅತ್ಯಗತ್ಯ. ಆ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಾಲ ವಸೂಲಾತಿ ಮಾಡುವಾಗ ಹೆದರಿಸಬಾರದು. ಹೆದರಿಸುವುದು ಕಂಡುಬಂದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದರು.

ದಬ್ಬಾಳಿಕೆ ಮಾಡಿ ವಸೂಲಾತಿ ಮಾಡಬಾರದು. ಪ್ರತಿಯೊಬ್ಬರ ನಾಗರಿಕ ರಕ್ಷಣೆ ಅತಿಮುಖ್ಯ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಲ ಪಡೆಯುವವರಿಗೆ ಲೋನ್ ಶೀಟ್ ನೀಡಬೇಕು. ಕಾನೂನು ಚೌಕಟ್ಟಿನಲ್ಲಿರಬೇಕು. ಎಂದು ವಿವರಿಸಿದರು.

ಆರ್‌ಬಿಐ ಮಾರ್ಗಸೂಚಿಯನ್ನು ದಪ್ಪ ಅಕ್ಷರದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಿಸಿ ಅಳವಡಿಸಬೇಕು. ಸಾಲದ ಬಡ್ಡಿ ಬಗ್ಗೆ ಮಾಹಿತಿ ಇರಬೇಕು. ಜನರಿಗೆ ತೊಂದರೆ ನೀಡಬಾರದು, ಕಾಲಾವಕಾಶ ನೀಡಬೇಕು ಎಂದರು.

ಸಾಲ ಪಡೆದು ಫೈನಾನ್ಸ್ ಕಂಪನಿಗಳ ವಿರುದ್ದ ತಿರುಗಿ ಬೀಳುವುದು ಕಂಡುಬಂದರೂ ಸಹ ಸಹಾಯವಾಣಿಗೆ ಕರೆ ಮಾಡಬಹುದು. ಒಟ್ಟಾರೆ ಸಮಾಜದಲ್ಲಿ ಶಾಂತಿಯುತ ಬದುಕು ನಡೆಸಬೇಕು. ಎಲ್ಲರ ರಕ್ಷಣೆಯು ಆಡಳಿತದ ಅತೀಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ಜಿಲ್ಲೆಯಲ್ಲಿ ನೋಂದಣಿಯಾಗಿರುವ ಮತ್ತು ನೋಂದಣಿಯಾಗದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮಾಹಿತಿ ಒದಗಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಸಾರ್ವಜನಿಕರು ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧಿತ ದೂರುಗಳನ್ನು ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 08272-228330 ಅಥವಾ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್ ಸಂಖ್ಯೆ 08272-221077 ಗೆ ನೀಡಬಹುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಒಬ್ಬರಿಗೆ ಒಂಬತ್ತು ಕಂಪನಿಗಳು ಸಾಲ ನೀಡಿರುವುದು ಕಂಡುಬಂದಿದೆ. ಸಾಲ ನೀಡುವಾಗ ಪರಿಶೀಲಿಸಬೇಕು. ಅದನ್ನು ಬಿಟ್ಟು ದೌರ್ಜನ್ಯ ನಡೆಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೈಕ್ರೋ ಪೈನಾನ್ಸ್ ಕಂಪನಿಯ ಪ್ರತಿನಿಧಿಯೊಬ್ಬರು ಸಾಲ ಪಡೆದವರು ಸಾಲ ವಾಪಸ್‌ ನೀಡಲು ಮುಂದೆ ಬರುತ್ತಿಲ್ಲ. ನಮ್ಮ ಮೇಲೆಯೇ(ಪೈನಾನ್ಸ್ ಕಂಪನಿಗಳ ಮೇಲೆ) ದೌರ್ಜನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಪ್ರೊ.ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇದ್ದರು.

Share this article