ಕನ್ನಡಪ್ರಭ ವಾರ್ತೆ ಭದ್ರಾವತಿ
ಮಂಗಳವಾರ ರಾತ್ರಿ ಕ್ರಿಕೆಟ್ ಆರಂಭಗೊಳ್ಳುವ ೨ ಗಂಟೆಗಳ ಮುಂಚೆಯೇ ನಗರದಲ್ಲಿ ಸ್ವಯಂ ಘೋಷಿತ ಕರ್ಫ್ಯೂ ಆಚರಣೆಯಲ್ಲಿರುವಂತೆ ಕಂಡು ಬಂದಿತು. ಬಹುತೇಕ ವಾಣಿಜ್ಯ ರಸ್ತೆಗಳ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಅಲ್ಲದೆ ಜನಸಂದಣಿ ವಿರಳವಾಗಿರುವುದು ಕಂಡುಬಂದಿತು.
ಅಭಿಮಾನಿಗಳ ಇಚ್ಛೆಯಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಕುಟುಂಬ ವರ್ಗದವರು ನಗರದ ಪ್ರಮುಖ ಆಟೋ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಎಲ್‌ಸಿಡಿ ಪರದೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಆರ್‌ಸಿಬಿ ತಂಡ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು. ಎಲ್ಲೂ ಸಹ ಯಾವುದೇ ಅಹಿತಕರ ಘಟನೆಗಳು ನಡೆದಿರುವುದು ಕಂಡು ಬಂದಿಲ್ಲ.ಅಭಿನಂದನೆಗಳ ಮಹಾಪೂರ:
ವಾಟ್ಸಪ್, ಫೇಸ್‌ಬುಕ್, ಎಕ್ಸ್, ಲಿಂಕ್ಡ್‌ಇನ್, ಯುಟ್ಯೂಬ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದಾಡುತ್ತಿದ್ದು, ಬುಧವಾರ ಸಹ ಸಂಭ್ರಮಾಚರಣೆ ಮುಂದುವರೆದಿದೆ.
ನಗರದ ಪತ್ರಕರ್ತ ಸುರೇಶ್-ಶಾಂತಕುಮಾರಿ ದಂಪತಿಯ ಪುತ್ರಿ ಶಿವಾನಿ(ಬಿ.ಎಸ್ ಪ್ರಗತಿ) ಮತ್ತು ಜಿ.ಎಂ ವೀರಭದ್ರಪ್ಪರವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮಂಗಳವಾರ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಐಪಿಎಲ್ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.