ಹಾವೇರಿ: ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಭ್ರಮ ಮನೆಮಾಡಿದ್ದು, ನಗರದ ಭಗತ್ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಊಟ ಬಡಿಸಿ ಸಂಭ್ರಮ ಹಂಚಿಕೊಳ್ಳಲಾಯಿತು.
ಆರ್ಸಿಬಿ ಕಪ್ ಗೆದ್ದರೆ ಹೋಳಿಗೆ ಸೀಕರಣೆ ಊಟ ಬಡಿಸುವುದಾಗಿ ಮೊದಲೇ ಹೇಳಿದ್ದ ಇಲ್ಲಿಯ ಭಗತ್‌ಸಿಂಗ್ ಕಾಲೇಜಿನ ಅಧ್ಯಕ್ಷ ಸತೀಶ ಎಂ.ಬಿ. ಅವರು ಬುಧವಾರ ಮಧ್ಯಾಹ್ನ ಕಾಲೇಜಿನ ವಿದ್ಯಾರ್ಥಿಗಳಿಗೆ, ಸಿಬ್ಬಂದಿ ಸೇರಿದಂತೆ ನೂರಾರು ಜನರಿಗೆ ಹೋಳಿಗೆ ಸೀಕರಣೆ, ಅನ್ನ ಸಾಂಬಾರ ಬಡಿಸಿ ಸಂಭ್ರಮಪಟ್ಟರು.
ಇದಕ್ಕೂ ಮುನ್ನ ಕೇಕ್ ಕಟ್ ಮಾಡಿ ಕಪ್ ನಮ್ದೇ ಎಂದು ವಿದ್ಯಾರ್ಥಿಗಳು ಸಂಭ್ರಮಿಸಿದರು. ಹಲವು ವರ್ಷಗಳಿಂದ ಕಂಡಿದ್ದ ಕನಸು ನನಸಾದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸಿಹಿ ಊಟ ಬಡಿಸಿದ್ದೇನೆ ಎಂದು ಸತೀಶ ಎಂ.ಬಿ. ಹೇಳಿದರು.ಆರ್‌ಸಿಬಿ ಗೆಲುವು: ಅಭಿಮಾನಿಗಳ ಸಂಭ್ರಮರಾಣಿಬೆನ್ನೂರು: ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಾರಂಭವಾಗಿ 18 ವರ್ಷಗಳ ನಂತರ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಮಂಗಳವಾರ ರಾತ್ರಿ ನಗರದಾದ್ಯಂತ ಸಂಭ್ರಮಾಚರಣೆ ಮಾಡಿದರು.ನಗರದ ಎಲ್ಲ ಭಾಗಗಳಿಂದ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಆರ್‌ಸಿಬಿ ಅಭಿಮಾನಿಗಳು ಸುಮಾರು ಒಂದು ಗಂಟೆ ಕಾಲ ಕೇಕೆ ಹಾಕಿ, ಪಟಾಕಿ ಸಿಡಿಸಿ, ನೃತ್ಯ ಮಾಡುತ್ತಾ ಸಂತಸವನ್ನು ಹಂಚಿಕೊಂಡರು. 2011ರಲ್ಲಿ ಭಾರತ ಎರಡನೇ ಬಾರಿಗೆ ವಿಶ್ವಕಪ್ ಜಯಿಸಿದಾಗ ನಡೆದ ಸಂಭ್ರಮಾಚರಣೆ ನೆನಪಿಸುವಂಥ ವಾತಾವರಣ ನಿರ್ಮಾಣವಾಗಿತ್ತು. ಅನೇಕ ಅಭಿಮಾನಿಗಳು ತಮ್ಮ ಮನೆಗಳ ಚಾವಣಿ ಮೇಲೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ದೊಡ್ಡ ಪರದೆ: ಅಭಿಮಾನಿಗಳಿಗೆ ಐಪಿಎಲ್ ಫೈನಲ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಶಾಸಕ ಪ್ರಕಾಶ ಕೋಳಿವಾಡ ನಗರಸಭೆ ಕ್ರೀಡಾಂಗಣದಲ್ಲಿ ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿದ್ದರು. ಪಂದ್ಯ ವೀಕ್ಷಿಸಲು ಅಪಾರ ಜನಸ್ತೋಮ ಆಗಮಿಸಿದ್ದು, ವಿಶೇಷವಾಗಿ ಯುವಜನತೆ ಹೆಚ್ಚಾಗಿ ಜಮಾಯಿಸಿದ್ದರು. ಪಂದ್ಯ ನಡೆಯುವ ಸ್ಟೇಡಿಯಂ ರೀತಿಯಲ್ಲಿ ಚೀಯರ್ ಗರ್ಲ್ಸ್ ಮತ್ತು ಬಾಯ್ಸ್ ಆಯೋಜನೆ ಮಾಡಲಾಗಿತ್ತು. ಅಭಿಮಾನಿಗಳು ಆರ್‌ಸಿಬಿಗೆ ಸ್ಫೂರ್ತಿ ನೀಡುವ ಸಲುವಾಗಿ ಕೆಂಪು ಬಾವುಟಗಳನ್ನು ಒದಗಿಸಲಾಗಿತ್ತು. ಮಕ್ಕಳ ಜತೆಗೆಶಾಸಕ ಪ್ರಕಾಶ ಕೋಳಿವಾಡ ಪುಟ್ಟ ಮಕ್ಕಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡಿದರು. ಪಂದ್ಯಾವಳಿ ವೀಕ್ಷಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಪಂದ್ಯ ಮುಗಿಯುವವರೆಗೂ ಸ್ಥಳದಲ್ಲಿದ್ದು, ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಕಾಳಜಿ ವಹಿಸಿದರು.