ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲವು ಸಾಧಿಸಿದ ಹಿನ್ನೆಲೆ ಭಾನುವಾರ ರಾತ್ರಿ ನಗರದಾದ್ಯಂತ ನಡೆದ ವಿಜಯೋತ್ಸವದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾರ್ವಜನಿಕರು ಹೈರಾಣಾದರು.
ಹುಬ್ಬಳ್ಳಿ:
ಆರ್‌ಸಿಬಿ ವಿಜಯೋತ್ಸವ ವೇಳೆ ಪಟಾಕಿ ಹೊಡೆಯುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದ ಘಟನೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದೇ ವಿಚಾರವಾಗಿ ಸೋಮವಾರ ಬೆಳಗ್ಗೆ ಕಲ್ಲು ತೂರಾಟ ನಡೆದು ಒಟ್ಟು 14 ಜನರ ಮೇಲೆ ದೂರು- ಪ್ರತಿದೂರು ದಾಖಲಾಗಿವೆ.
ರಾತ್ರಿ ಪಟಾಕಿ ಹೊಡೆದ ವಿಚಾರಕ್ಕೆ ಒಂದು ಕೋಮಿನ ಕುಟುಂಬದವರು, ಇನ್ನೊಂದು ಕೋಮಿನ ಕುಟುಂಬವನ್ನು ಪ್ರಶ್ನಿಸಿದ್ದಾರೆ. ಆಗ ಪಟಾಕಿ ಹೊಡೆದವರು ನಾವಲ್ಲ ಎಂದು ಹೇಳಿದ್ದು, ಗಲಾಟೆ ಶಾಂತವಾಗುವ ಹೊತ್ತಿಗೆ ಓರ್ವನ ತಲೆಗೆ ಹೊಡೆದು ಹಲ್ಲೆ ಮಾಡಲಾಗಿದೆ. ಇದೇ ವಿಚಾರವಾಗಿ ಬೆಳಗ್ಗೆ ಜಗಳ ಪ್ರಾರಂಭವಾಗಿ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ಕೊಟ್ಟಿದ್ದಾರೆ. ಆದರೆ, ಎಫ್‌ಐಆರ್ ಇನ್ನು ದಾಖಲಾಗಿಲ್ಲ. ಘಟನೆಯಲ್ಲಿ ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತಿರೇಕದ ವರ್ತನೆ:
ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲವು ಸಾಧಿಸಿದ ಹಿನ್ನೆಲೆ ಭಾನುವಾರ ರಾತ್ರಿ ನಗರದಾದ್ಯಂತ ನಡೆದ ವಿಜಯೋತ್ಸವದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾರ್ವಜನಿಕರು ಹೈರಾಣಾದರು.
ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಣೆಗೆ ಸೇರಿದ್ದ ಸಾವಿರಾರು ಅಭಿಮಾನಿಗಳ ವರ್ತನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸುಖಾಸುಮ್ಮನೆ ಸಾರ್ವಜನಿಕರ ಮೇಲೆ ಹಲ್ಲೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಗಳು ನಡೆದಿವೆ. ಆದರೆ, ಈ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಜತೆಗೆ ಗೋಕುಲ ರಸ್ತೆ, ವಿದ್ಯಾನಗರ, ಹಳೇಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಕೆಲ ಸಾರ್ವಜನಿಕರಿಗೆ ವಿನಾಕಾರಣ ಕಿರಿಕಿರಿ ಉಂಟು ಮಾಡಲಾಗಿದೆ.
ಹಲ್ಲೆ-ವೀಡಿಯೋ ವೈರಲ್:
ವಿದ್ಯಾನಗರ ಶಿರೂರು ಪಾರ್ಕ್ ಕಡೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ರೀತಿ ಗೋಕುಲ ರೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಟಾಕಿ ಹೊಡೆಯುವ ವಿಚಾರಕ್ಕೆ ಹಾಗೂ ವಿಜಯೋತ್ಸವ ವಿಚಾರಕ್ಕೆ ಸಣ್ಣ-ಪುಟ್ಟ ಹೊಡೆದಾಟಗಳು ನಡೆದಿದ್ದು, ಯಾವುದೇ ಠಾಣೆ ಮೆಟ್ಟಿಲು ಹತ್ತಿಲ್ಲ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.