ಶಾಲೆಯಲ್ಲಿ ಮತ್ತೆ ಶುರುವಾಯ್ತು ಮಕ್ಕಳ ಕಲರವ!

KannadaprabhaNewsNetwork |  
Published : Jun 02, 2026, 02:15 AM IST
ಹುಬ್ಬಳ್ಳಿ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. | Kannada Prabha

ಸಾರಾಂಶ

ಹುಬ್ಬಳ್ಳಿಯ ಗಂಟಿಕೇರಿಯ ನೇತಾಜಿ ಸುಭಾಶ್ಚಂದ್ರ ಬೋಸ್‌ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಬ್ಬಳ್ಳಿ ಶಹರ್‌ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ತಹಸೀಲ್ದಾರ್‌ ಮಹೇಶ ಗಸ್ತೆ ಚಾಲನೆ ನೀಡಿದರು.

ಹುಬ್ಬಳ್ಳಿ:

ಬೇಸಿಗೆ ರಜೆ ಕಳೆದು ಶಾಲೆಗಳಲ್ಲೀಗ ಮತ್ತೆ ಮಕ್ಕಳ ಕಲರವ ಕೇಳಿ ಬಂದಿದೆ. ಶೈಕ್ಷಣಿಕ ವರ್ಷದ ಅಂಗವಾಗಿ ನಗರದ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು.

ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಮೊದಲ ದಿನ ಹೂ ಮಳೆ, ಗುಲಾಬಿ, ಚಾಕ್‌ಲೇಟ್‌, ಪುಸ್ತಕ ನೀಡಿ ಸ್ವಾಗತಿಸಲಾಯಿತು. ಮಕ್ಕಳೂ ಸಹ ಮೊದಲ ದಿನವೇ ಅತ್ಯಂತ ಉತ್ಸಾಹದಿಂದ ಶಾಲೆಗೆ ಆಗಮಿಸಿ ಪಠ್ಯ-ಪುಸ್ತಕ ಪಡೆದು ಸಂಭ್ರಮಿಸಿದರು. ಶಾಲಾ ಆವರಣವನ್ನು ಬಣ್ಣ ಬಣ್ಣದ ತೋರಣ, ಬಲೂನು ಹಾಗೂ ರಂಗೋಲಿಗಳಿಂದ ಅಲಂಕರಿಸಲಾಗಿತ್ತು.

ಇಲ್ಲಿನ ಗಂಟಿಕೇರಿಯ ನೇತಾಜಿ ಸುಭಾಶ್ಚಂದ್ರ ಬೋಸ್‌ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಬ್ಬಳ್ಳಿ ಶಹರ್‌ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ತಹಸೀಲ್ದಾರ್‌ ಮಹೇಶ ಗಸ್ತೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹೊಸ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅವಕಾಶ ತರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜತೆಗೆ ಶಿಸ್ತು, ಸಂಸ್ಕಾರ ಹಾಗೂ ಕೌಶಲ್ಯ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಂ. ಫಡ್ನಿಸಿ, ಕ್ಷೇತ್ರ ಸಮನ್ವಯಾಧಿಕಾರಿ ಅನಸೂಯಾ ಯಕ್ಕುಂಡಿ ಸೇರಿದಂತೆ ಡಯಟ್‌ನ ಉಪನ್ಯಾಸಕರು ಹಾಗೂ ಸಿಬ್ಬಂದಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಜತೆಗೆ ಇಲ್ಲಿನ ಲ್ಯಾಮಿಂಗ್ಟನ್‌ ಶಾಲೆ, ನಾಗಶೆಟ್ಟಿಕೊಪ್ಪ, ಗೋಪನಕೊಪ್ಪ, ಕೇಶ್ವಾಪುರ, ಹಳೇಹುಬ್ಬಳ್ಳಿ, ನವನಗರ ಸೇರಿದಂತೆ ಬಹುತೇಕ ಹುಬ್ಬಳ್ಳಿ ಶಹರ ವ್ಯಾಪ್ತಿಗಳ ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗಳಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು.

ಸೆಲ್ಫಿ ಪಾಯಿಂಟ್‌:

ತಾಲೂಕಿನ ಅಂಚಟಗೇರಿ, ಬ್ಯಾಹಟ್ಟಿಯಲ್ಲಿರುವ ಕೆಜಿಎಸ್‌ ಸ್ಕೂಲ್‌, ಉಣಕಲ್ಲ, ಗೋಪನಕೊಪ್ಪದಲ್ಲಿರುವ ಕೆಪಿಎಸ್‌ ಸೇರಿದಂತೆ ಹಲವು ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದ ದಿನದಂದು ಸೆಲ್ಫಿ ಪಾಯಿಂಟ್‌ ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಸೆಲ್ಫಿ ಪಾಯಿಂಟ್‌ನಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಅಂಚಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ "ಉತ್ತಮ ಕಲಿಕೆ ಉಜ್ವಲ ಭವಿಷ್ಯ " ಎಂಬ ಧ್ಯೇಯವಾಕ್ಯದೊಂದಿಗೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಯಿತು. ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಮಕ್ಕಳಿಗೆ ಹೂ ಮಳೆಗರೆಯುತ್ತಾ ಶಾಲೆಗೆ ಬರಮಾಡಿಕೊಂಡರು. ಮುಖ್ಯೋಪಾಧ್ಯಾಯ ಎಂ.ಎಸ್. ಶಿವಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಜೋಳಪ್ಪನವರ, ಸದಸ್ಯರಾದ ಕಲ್ಲಪ್ಪ ಚವರಗುಡ್ಡ, ಈಶ್ವರಪ್ಪ ಪವಾಡದ, ಮಜಾನಬಿ ಹೊರಕೇರಿ, ಶಿವಪ್ಪ ಸಾದರ, ಬಸವರಾಜ ಗಬ್ಬೂರ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೇಶನ ಹಂಚಿಕೆಗಾಗಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ
ಜಿಲ್ಲಾದ್ಯಂತ ಶಾಲೆಗಳ ಪ್ರಾರಂಭೋತ್ಸವ