ಕನ್ನಡಪ್ರಭ ವಾರ್ತೆ ಮಂಡ್ಯ
ಕೃತಿ ಬಿಡುಗಡೆ ಮಾಡಿದ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ಹಳ್ಳಿಗಳಲ್ಲಿ ರಾಮಾಯಣ, ಮಹಾ ಭಾರತದಂತಹ ಕಥನಗಳನ್ನು ಜನರು ಓದದೇ ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇಂದು ಮಹಾಕಾವ್ಯಗಳನ್ನು ಎಷ್ಟೇ ಓದಿದರೂ ಕೆಲವರಿಗೆ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದೇ ಇಲ್ಲ ಎಂದರು.
ವಾಲ್ಮೀಕಿಯಿಂದ ರಾಮ ಹಾಗೂ ವ್ಯಾಸರಿಂದ ಶ್ರೀಕೃಷ್ಣನ ಪರಿಚಯವಾಯಿತು. ಎಲ್ಲಿ ಹಾಡುಗಾರರು, ಗಮಕಿಗಳು ಇದ್ದಾರೋ ಅಲ್ಲಿ ಕಾವ್ಯಗಳು ಸಾವಿರಾರು ವರ್ಷ ರಾರಾಜಿಸುತ್ತವೆ ಎಂಬುದನ್ನು ಈಗಲೂ ಹಳ್ಳಿಗರು ಹೇಳುವ ಪುರಾಣಗಳು ತಿಳಿಸುತ್ತವೆ ಎಂದರು.ಕವಿಯ ಪ್ರತಿಬಿಂಬವೇ ಕಾವ್ಯವಾಗಿದೆ. ಗೀಚಿದೆಲ್ಲವೂ ಕವಿತೆಗಳಾಗುವುದಿಲ್ಲ, ವೈಯಕ್ತಿಕ ಅನುಭವವು ಸಾರ್ವತ್ರಿಕ ಅನುಭವವಾಗಲು ಸಾಧ್ಯವಿದೆ. ಸನ್ನಿವೇಶಗಳನ್ನು ಕವಿಗಳು ಸೃಷ್ಟಿಸಿಕೊಡಬೇಕು ಎಂದು ಸಲಹೆ ನೀಡಿದರು.
ಡಾ.ಚಂದ್ರಶೇಖರ್ ಅವರು ವೈದ್ಯರಾದರೂ, ಸಮಾಜ, ಗೆಳೆಯರ ಬಗ್ಗೆ ಒಳ್ಳೆಯ ಮಾತುಗಳಿಂದ ಹೆಜ್ಜೆಗುರುತು ಕವನ ಸಂಗ್ರಹ ಕೃತಿಯಲ್ಲಿ ಬರೆದಿದ್ದಾರೆ. ಮತ್ತೊಬ್ಬರಿಗೆ ಒಳ್ಳೇದಾಗಲಿ ಎನ್ನುವ ಗುಣವೇ ಕಡಿಮೆ. ಈ ಕವಿತೆಗಳು ಜನರ ಕಷ್ಟಗಳನ್ನು ಹೇಳಿವೆ. ಇವರ ಕೃತಿಗೆ ಮುನ್ನುಡಿ ಬರೆದಿರುವುದು ತಮಗೆ ಸಮಾಧಾನವಿದೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಖ್ಯಾತ ವೈದ್ಯರಾದ ಡಾ.ರಾಮಲಿಂಗೇಗೌಡ, ಡಾ.ವಿಜಯಾ, ಡಾ.ಬಿ.ಕೆ.ಸುರೇಶ್, ಎಂ.ಎಸ್.ಅನಿತಾ ಭಾಗವಹಿಸಿದ್ದರು.