ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಚಿಕ್ಕಮಗಳೂರು ನಗರ ಮಂಡಲ ಬಿಜೆಪಿ ಸಭೆ
ಮತದಾರಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳುವುದು ಹಾಗೂ ಅನರ್ಹ ಮತದಾರರ ಸೇರ್ಪಡೆ ತಡೆಯುವುದು ಪಕ್ಷದ ಕಾರ್ಯಕರ್ತರ ಪ್ರಮುಖ ಜವಾಬ್ದಾರಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಚಿಕ್ಕಮಗಳೂರು ನಗರ ಮಂಡಲ ಬಿಜೆಪಿ ಸಭೆಯಲ್ಲಿ ಮಾತನಾಡಿ ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಕೈಬಿಡದಂತೆ ಎಚ್ಚರಿಕೆ ವಹಿಸಿ. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಅದೇ ರೀತಿ ಅನರ್ಹರು ಪಟ್ಟಿಗೆ ಸೇರ್ಪಡೆಯಾಗಬಾರದು. ಕೆಲವೆಡೆ ಒಂದೇ ವ್ಯಕ್ತಿಯ ಹೆಸರು ಎರಡು ಅಥವಾ ಮೂರು ಕಡೆಗಳಲ್ಲಿ ದಾಖಲಾದ ಮಾಹಿತಿ ಇದೆ. ಇದನ್ನು ಪತ್ತೆಹಚ್ಚಿ ಸರಿಪಡಿಸಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಬೂತ್ ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಪರಿಶೀಲಿಸಬೇಕು. ಮೊದಲು ಮ್ಯಾಪಿಂಗ್ ಆಗದ ಮತದಾರರ ಪಟ್ಟಿ ಪಡೆದು, ಆರ್ಹರ ಹೆಸರು ಕೈಬಿಟ್ಟಿದ್ದರೆ ತಕ್ಷಣ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು.ಒಂದು ಕಾಲದಲ್ಲಿ ಚಿಕ್ಕಮಗಳೂರಿನಲ್ಲಿ ಐದಕ್ಕೈದು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಈಗ ಕಾಂಗ್ರೆಸ್ ಎಲ್ಲಾ ಸ್ಥಾನಗಳನ್ನು ಗೆದ್ದಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ದೊರೆತಿದೆ. ಹೀಗಾಗಿ ಕಾಂಗ್ರೆಸ್ ಗೆಲುವು ಅದರ ಸಂಘಟನಾ ಸಾಮರ್ಥ್ಯದ ಪ್ರತಿಫಲವಲ್ಲ, ಸಂದರ್ಭದ ಲಾಭ. ಕಾಂಗ್ರೆಸ್ ಗೆಲುವಿನ ಹಿಂದೆ ತಂತ್ರ ಗಾರಿಕೆ, ವ್ಯೂಹ ಹಾಗೂ ಕುತಂತ್ರವೂ ಕಾರಣವಾಗಿರಬಹುದು. ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೇ ಚಕ್ರವ್ಯೂಹ ಭೇದಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೌನ್ಸಿಲರ್ ಆಗುವ ಆಸೆ ಇರುವವರು ಕೇವಲ ಪಕ್ಷದ ಕಚೇರಿಗೆ ಬರುವುದರಿಂದ ಸಾಲದು. ಜನರ ನಡುವೆ ಇರಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ವಿಶ್ವಾಸ ಗಳಿಸಿದವರ ಹೆಸರನ್ನೇ ಜನ ಟಿಕೆಟ್‌ಗೆ ಶಿಫಾರಸು ಮಾಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು ವೈದ್ಯಕೀಯ ಕಾಲೇಜು, ಡಿಸಿ ಕಚೇರಿ ಸಂಕೀರ್ಣ, ಬೈಪಾಸ್ ರಸ್ತೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಯಲು ಸೀಮೆ ಕೆರೆ ತುಂಬಿಸುವುದು ಜಿಲ್ಲೆಯ ಪ್ರಮುಖ ಅಭಿವೃದ್ಧಿ ಯೋಜನೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿವೆ. ಇದರ ಶ್ರೇಯಸ್ಸು ಬಿಜೆಪಿಗೆ ಸಲ್ಲಬೇಕು. ಜನರಿಗೆ ಈ ವಿಷಯ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಬಿಎಲ್ಎ -1 ಸೀತಾರಾಮ ಭರಣ್ಯ, ಹಿರಿಯ ಮುಖಂಡ ಕೋಟೆ ರಂಗನಾಥ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ ಕುಮಾರ್, ಮುಖಂಡರಾದ ಕೌಶಿಕ್, ವೆಂಕಟೇಶ್, ಜಯರಾಮ್, ಬಸವರಾಜ್, ಜಗದೀಶ್, ಜಯವರ್ಧನ್ ಇದ್ದರು.