7 ತಿಂಗಳಿಂದ ಏಳು ಕೋಟಿ ರು.ಗೆ ಠಾಣೆಯಲ್ಲೇ ಕಾವಲು!

KannadaprabhaNewsNetwork |  
Published : Jun 02, 2026, 02:00 AM ISTUpdated : Jun 02, 2026, 12:28 PM IST
money

ಸಾರಾಂಶ

ಎಟಿಎಂ ಕೇಂದ್ರಕ್ಕೆ ತುಂಬಬೇಕಿದ್ದ 7.11 ಕೋಟಿ ರು. ದರೋಡೆ ಪ್ರಕರಣ ನಡೆದು ಏಳು ತಿಂಗಳು ಕಳೆದಿದಿದ್ದರೂ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಏಳು ಕೋಟಿ ರುಪಾಯಿ ಮಾತ್ರ ಇನ್ನೂ ಸಿದ್ದಾಪುರ ಠಾಣೆಯಲ್ಲಿ ಕೊಳೆಯುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಕಾಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ.

ಮಂಜುನಾಥ ಕೆ.

 ಬೆಂಗಳೂರು :  ಎಟಿಎಂ ಕೇಂದ್ರಕ್ಕೆ ತುಂಬಬೇಕಿದ್ದ 7.11 ಕೋಟಿ ರು. ದರೋಡೆ ಪ್ರಕರಣ ನಡೆದು ಏಳು ತಿಂಗಳು ಕಳೆದಿದಿದ್ದರೂ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಏಳು ಕೋಟಿ ರುಪಾಯಿ ಮಾತ್ರ ಇನ್ನೂ ಸಿದ್ದಾಪುರ ಠಾಣೆಯಲ್ಲಿ ಕೊಳೆಯುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಕಾಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ.

2025ರ ನವೆಂಬರ್‌ನಲ್ಲಿ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿಗೆ ಸೇರಿದ್ದ ವಾಹನವನ್ನು ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಡೇರಿ ಸರ್ಕಲ್‌ನ ಮೇಲ್ಸೇತುವೆ ಮೇಲೆ ಅಡ್ಡಗಟ್ಟಿದ ದರೋಡೆಕೋರರ ತಂಡ ಹಣದೊಂದಿಗೆ ಪರಾರಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸಿಎಂಎಸ್‌ ಸಂಸ್ಥೆ ಮಾಜಿ ನೌಕರ ಕ್ಸೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಪೇದೆಯಾಗಿದ್ದ ಅಣ್ಣಪ್ಪ ನಾಯ್ಕ್, ಸಿಎಂಎಸ್‌ ಸಂಸ್ಥೆ ಸಿಬ್ಬಂದಿಯಾಗಿದ್ದ ಗೋಪಿ ಸೇರಿ ಒಟ್ಟು 9 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳಿಂದ ಒಟ್ಟು 7.1 ಕೋಟಿ ರು.ಗಳನ್ನು ಜಪ್ತಿ ಮಾಡಲಾಗಿತ್ತು. ದರೋಡೆಕೋರರಿಂದ ವಶಕ್ಕೆ ಪಡೆಯಲಾಗಿದ್ದ ಅಷ್ಟೂ ಹಣವನ್ನು ಇದೀಗ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿಯೇ ಇಡಲಾಗಿದೆ.

ಹಣ ಕಾಯುವುದೇ ಸವಾಲಿನ ಕೆಲಸ:

ಕಳೆದ ಏಳು ತಿಂಗಳಿನಿಂದ ಬೃಹತ್‌ ಮೊತ್ತದ ಹಣ ಠಾಣೆಯಲ್ಲಿಯೇ ಇದ್ದು, ಪೊಲೀಸರು ಹದ್ದಿನ ಕಣ್ಣಿಟ್ಟು ಅದನ್ನು ಕಾವಲು ಕಾಯುತ್ತಿದ್ದಾರೆ. ಇನ್ನು ನೈಟ್‌ ಬೀಟ್‌ ಮಾಡುವ ಸಿಬ್ಬಂದಿ ಕೂಡ ಎಚ್ಚರದಿಂದಿದ್ದಾರೆ. ಯಾವುದೇ ವ್ಯಕ್ತಿಗಳು ರಾತ್ರಿ ವೇಳೆ ಠಾಣೆಗೆ ಬಂದರೆ ಅವರನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಣ ಕಾಪಾಡುವ ಜವಾಬ್ದಾರಿ ನಮ್ಮದು:

ಪೊಲೀಸ್‌ ಠಾಣೆ ಅಂದ ಮೇಲೆ ಜಪ್ತಿ ಮಾಡಿದ ಸಾಕಷ್ಟು ವಸ್ತುಗಳು ಹಾಗೂ ಹಣ ಇದ್ದೇ ಇರುತ್ತದೆ. ಕೋರ್ಟಿನಿಂದ ನಮಗೆ ಆದೇಶ ಬರುವರೆಗೂ ಅದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ. ಇದೇ ರೀತಿ ದರೋಡೆ ಪ್ರಕರಣದಲ್ಲಿ ಜಪ್ತಿ ಮಾಡಲಾದ ಹಣವನ್ನೂ ಭದ್ರವಾಗಿ ಇಡಲಾಗಿದೆ. ದೊಡ್ಡ ಮೊತ್ತದ ಹಣ ಇರುವುದರಿಂದ ನಮಗೆ ಯಾವುದೇ ಒತ್ತಡವಿಲ್ಲ. ಹಣದ ಭದ್ರತೆಗೆ ಸಿಬ್ಬಂದಿ ಹಾಗೂ ಸಿಸಿ ಕ್ಯಾಮೆರಾಗಳಿವೆ. ನ್ಯಾಯಾಲಯದ ಆದೇಶ ಬಂದ ಕೂಡಲೇ ಸಂಬಂಧಪಟ್ಟವರಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದುವರಿದ ಕೋರ್ಟ್‌ ಪ್ರಕ್ರಿಯೆ:

ಜಪ್ತಿ ಮಾಡಲಾದ ಹಣವನ್ನು ಸಿಎಂಎಸ್‌ ಏಜೆನ್ಸಿಗೆ ಹಿಂದಿರುಗಿಸುವ ಸಂಬಂಧ ಕೋರ್ಟ್‌ ಪ್ರಕ್ರಿಯೆ ಇನ್ನೂ ಮುಂದುವರಿದಿದ್ದು, ಇದರಿಂದಾಗಿ ಹಣ ಠಾಣಾ ಲಾಕರ್‌ನಲ್ಲಿಯೇ ಉಳಿಯುವಂತಾಗಿದೆ. ಕೋರ್ಟ್‌ ಪ್ರಕ್ರಿಯೆ ಪೂರ್ಣಗೊಂಡು ನ್ಯಾಯಾಲಯದಿಂದ ಆದೇಶ ಬಂದ ಕೂಡಲೇ ಹಣವನ್ನು ಸಂಬಂಧಪಟ್ಟವರಿಗೆ ಪೊಲೀಸರು ಹಿಂದಿರುಗಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ತೀರಿಸಲು ದರೋಡೆ

ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿಗಳು, ಸಾಲ ತೀರಿಸುವ ಉದ್ದೇಶದಿಂದ ದರೋಡೆ ಮಾಡಿದ್ದರು. ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಕನಸು ಕಂಡಿದ್ದರು ಎಂಬುದು ಪೊಲೀಸ್​​ ತನಿಖೆ ವೇಳೆ ಬಯಲಾಗಿತ್ತು. ಆರೋಪಿಗಳಾದ ಗೋಪಿ ಮತ್ತು ಕ್ಸೇವಿಯರ್ 17 ಸಾವಿರ ರು. ಸಂಬಳ ಪಡೆಯುತ್ತಿದ್ದರು. ಆ ಪೈಕಿ ಕ್ಸೇವಿಯರ್ ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದ. ಕುಡಿತ, ಜೂಜಿನ ಚಟದಿಂದಾಗಿ ಆರೋಪಿಗಳು ಹಣಕಾಸು ಸಮಸ್ಯೆಗೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಪ್ಲ್ಯಾನ್ ಪ್ರಕಾರ ಎಟಿಎಂ ಕೇಂದ್ರ ಹಣ ತುಂಬುವ ವಾಹನ ದರೋಡೆ ಮಾಡಲಾಗಿತ್ತು. ಸಿಬ್ಬಂದಿ ಗೋಪಿಯೇ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್​ ಎಂಬುದು ಬಹಿರಂಗವಾಗಿತ್ತು. ಪ್ರಕರಣದ ಸಂಬಂಧ ಕೋರ್ಟ್‌ಗೆ ಚಾರ್ಜ್‌ಶೀಟ್‌ ಕೂಡ ಸಲ್ಲಿಸಲಾಗಿತ್ತು 

ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ ಪ್ರಕ್ರಿಯೆ ನಡೆಯುತ್ತಿದ್ದು, ಕೋರ್ಟ್‌ ಆದೇಶಕ್ಕಾಗಿ ಕಾಯುತ್ತಿದ್ದೇವೆ. ನ್ಯಾಯಾಲಯದ ಆದೇಶ ಬಂದ ಕೂಡಲೇ ಹಣವನ್ನು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಾಗುವುದು.

- ಡಾ.ಕೋನ ವಂಶೀಕೃಷ್ಣ, ದಕ್ಷಿಣ ವಿಭಾಗದ ಡಿಸಿಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ