ಯಳಂದೂರು: ಮಂಗಳವಾರ ರಾತ್ರಿ ನಡೆದ ಐಪಿಎಲ್‌ನ ಪಂದ್ಯಾವಳಿಯ ೧೮ನೇ ಆವೃತ್ತಿಯಲ್ಲಿ ೧೮ ವರ್ಷಗಳ ನಂತರ ಕಪ್‌ನ್ನು ಗೆದ್ದ ಆರ್‌ಸಿಬಿ ತಂಡದ ಅಭಿಮಾನಿಗಳು ಮಧ್ಯರಾತ್ರಿ ಹುಚ್ಚೆದ್ದು ಕುಣಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ರಸ್ತೆಯಲ್ಲೇ ನೃತ್ಯಮಾಡಿದ ಯುವಕರ ತಂಡದ ಚೀರಾಟಗಳು ಜೋರಾಗಿತ್ತು. ಎಲ್ಲೆಡೆ ವಿರಾಟ್ ಕೊಹ್ಲಿ, ಆರ್‌ಸಿಬಿ ಪರ ಜಯಘೋಷಗಳು ಮೊಳಗಿದವು. ಹೆಣ್ಣು ಮಕ್ಕಳು ಹಾಗೂ ಚಿಕ್ಕ ಮಕ್ಕಳೂ ಕೂಡ ಕುಣಿದು ಕುಪ್ಪಳಿಸಿದರು. ಆರ್‌ಸಿಬಿ ಹಾಗೂ ೧೮ ನೇ ಸಂಖ್ಯೆಯ ಜರ್ಸಿಗಳನ್ನು ಧರಿಸಿದ್ದ ಯುವಕರ ಗುಂಪು ಎಲ್ಲೆಡೆ ಕಾಣಸಿಕ್ಕಿತು.
ತಾಲೂಕಿನ ಬಿಳಿಗಿರಿರಂಗನಬೆಟ್ಟ, ಗುಂಬಳ್ಳಿ, ಯರಗಂಬಳ್ಳಿ, ಗೌಡಹಳ್ಳಿ, ಹೊನ್ನೂರು, ಕೆಸ್ತೂರು, ಕಂದಹಳ್ಳಿ, ಅಂಬಳೆ, ಗಂಗವಾಡಿ, ಅಗರ-ಮಾಂಬಳ್ಳಿ ಸೇರಿದಂತೆ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಅಲ್ಲಲ್ಲಿ ಆರ್‌ಸಿಬಿಯ ಫ್ಲೆಕ್ಸ್‌ಗಳು ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಆರ್‌ಸಿಬಿಯ ಗೆಲವಿನಲ್ಲಿ ಇಡೀ ತಾಲೂಕಿನ ಆರ್‌ಸಿಬಿಯ ಅಭಿಮಾನಿಗಳು ಈ ಸಂಭ್ರಮಾಚರಣೆಯನ್ನು ಆಚರಿಸುವ ಮೂಲಕ ಈ ಗೆಲುವನ್ನು ಅವಿಸ್ಮರಣೀಯವಾಗಿಸಿಕೊಂಡರು.