ವೃತ್ತ ಅರಣ್ಯಾಧಿಕಾರಿಗಳ ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಸೂಚನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಣ್ಯ ಹಕ್ಕು ಕಾಯಿದೆಯಡಿ ರಾಜ್ಯದಾದ್ಯಂತ ಸಲ್ಲಿಸಲಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತವಾಗಿದ್ದು, ಎಲ್ಲ ಅರ್ಜಿಗಗಳನ್ನು ಪುನರ್ ಪರಿಶೀಲನೆ ಮಾಡಿ, ಅರ್ಜಿದಾರರಿಗೆ ಸ್ವಾಭಾವಿಕ ನ್ಯಾಯದ ಅಡಿಯಲ್ಲಿ ಹಕ್ಕು ಪ್ರತಿಪಾದಿಸಲು ಅವಕಾಶ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದರು.ಶಿವಮೊಗ್ಗದ ಅರಣ್ಯ ಇಲಾಖೆಯ ಶ್ರೀಗಂಧ ಸಭಾಂಗಣದಲ್ಲಿ ಶಿವಮೊಗ್ಗ ವೃತ್ತ ಅರಣ್ಯಾಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, 2005ರ ಡಿ.13ರ ಮುನ್ನ ಅರಣ್ಯವಾಸಿಗಳಾಗಿದ್ದ ಎಲ್ಲ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯಿದೆಯಡಿ ಪರಿಹಾರ ಸಿಗಲೇಬೇಕು. ಅದೇ ರೀತಿ ಇತರ ಹಿಂದುಳಿದವರು ಈ ದಿನಾಂಕಕ್ಕೆ ಮುನ್ನ ಅರಣ್ಯದಲ್ಲಿ ಜೀವನೋಪಾಯಕ್ಕಾಗಿಯೇ ನೆಲೆಸಿದ್ದಲ್ಲಿ ನಿಯಮಾನುಸಾರ ಅವರಿಗೆ ಹಕ್ಕು ನೀಡಬೇಕಾಗುತ್ತದೆ. ಪ್ರಸ್ತುತ 3 ತಲೆಮಾರು ಅಂದರೆ 75 ವರ್ಷ ಅವರು ಅಲ್ಲಿದ್ದರು ಎಂದು ಸಾಬೀತು ಪಡಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ತಿಳಿಸಿದರು.
*ಶರಾವತಿ ಸಂತ್ರಸ್ತರ ಸಮಸ್ಯೆ ಚರ್ಚೆ: ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು 6 ದಶಕಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಸಲ್ಲಬೇಕಾದ ನೈಜ ಹಕ್ಕು ಕೊಡಿಸಲು ಎದುರಾಗಿರುವ ತೊಡಕು ನಿವಾರಿಸಲು ಸುಪ್ರೀಂಕೋರ್ಟ್ ನಲ್ಲಿ ಐಎ ಹಾಕಲಾಗಿದೆ. ಈ ಬಾರಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಭೂಮಿಯನ್ನು ಮಾನ್ಯ ಮಾಡಿ, ಸಂತ್ರಸ್ತರ ಸಮಸ್ಯೆ ಶೀಘ್ರ ಬಗೆಹರಿಸಲು ಉತ್ತಮ ವಕೀಲರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡುವಂತೆ ಸೂಚಿಸಿದರು. ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ: 1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣಗಳ ಪೈಕಿ ಪಟ್ಟಾಭೂಮಿ ಮತ್ತು ಒತ್ತುವರಿ ಎರಡೂ ಸೇರಿ 3 ಎಕರೆ ಮೀರದವರ ಮತ್ತು ಇದೇ ಭೂಮಿಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಸರ್ಕಾರ ಈ ಹಿಂದೆಯೇ ನಿರ್ಧಾರ ಮಾಡಿದೆ. ಬಡ ಜನರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.*ಬಿಎಚ್ ರಸ್ತೆಗೆ ಅರಣ್ಯ ನಾಶ ವರದಿ ನೀಡಲು ಸೂಚನೆ: ಬಿ.ಎಚ್. ರಸ್ತೆ ಪಥ ಬದಲಾವಣೆಯಿಂದಾಗಿ ಕರಡಿಬೆಟ್ಟ, ಅರಣ್ಯ ಬಚ್ಚಲು ಅರಣ್ಯಗಳು ನಾಶವಾಗುತ್ತವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದು, ಹಾಲಿ ಇರುವ ರಸ್ತೆ ಅಗಲೀಕರಣ ಮಾಡುವ ಮೂಲಕ ಅರಣ್ಯ ನಾಶ ತಪ್ಪಿಸಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಶಾರದಾ ನಾಯಕ್, ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.
850 ಅರಣ್ಯ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ: ಅರಣ್ಯ ಇಲಾಖೆಯಲ್ಲಿ ವನ ಪಾಲಕರಾಗಿ ಆಯ್ಕೆಯಾಗಿರುವ 310 ಅಭ್ಯರ್ಥಿಗಳಿಗೆ ಮತ್ತು 540 ಅರಣ್ಯ ರಕ್ಷಕರಿಗೆ ಮುಖ್ಯಮಂತ್ರಿಗಳಿಂದ ನೇಮಕಾತಿ ಪತ್ರ ವಿತರಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ನೀಗಿಸಲು ಈಗಾಗಲೇ ನೇಮಕಾತಿ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದ್ದು, ಶೀಘ್ರವೇ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.