ಹೀಲಲಿಗೆ - ರಾಜಾನುಕುಂಟೆ ಮಾರ್ಗರೈಲು ಕಾಮಗಾರಿಗೆ ಮರು ಟೆಂಡರ್‌

KannadaprabhaNewsNetwork |  
Published : Oct 14, 2025, 01:00 AM IST
ಸಬ್‌ಅರ್ಬನ್‌ ರೈಲು: | Kannada Prabha

ಸಾರಾಂಶ

ಬೆಂಗಳೂರು ಉಪನಗರ ರೈಲು ಯೋಜನೆಯ 4ನೇ ಕಾರಿಡಾರ್‌ ಹೀಲಲಿಗೆ - ರಾಜಾನುಕುಂಟೆ ಮಾರ್ಗದ (ಕನಕ) ಕಾಮಗಾರಿಗೂ ಮರು ಟೆಂಡರ್‌ ಕರೆಯಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಮುಂದಾಗಿದೆ.

 ಬೆಂಗಳೂರು :  ಬೆಂಗಳೂರು ಉಪನಗರ ರೈಲು ಯೋಜನೆಯ 4ನೇ ಕಾರಿಡಾರ್‌ ಹೀಲಲಿಗೆ - ರಾಜಾನುಕುಂಟೆ ಮಾರ್ಗದ (ಕನಕ) ಕಾಮಗಾರಿಗೂ ಮರು ಟೆಂಡರ್‌ ಕರೆಯಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಮುಂದಾಗಿದೆ.

ಯೋಜನೆ ಪ್ರಕಾರ ಸಾಗಿದ್ದರೆ ಮುಂದಿನ ವರ್ಷದ ಅಂತ್ಯಕ್ಕೆ ಈ ಮಾರ್ಗದಲ್ಲಿ ಸಬ್‌ಅರ್ಬನ್‌ ರೈಲಿನ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಆದರೆ, ಈಗ ಟೆಂಡರ್‌ ಕರೆಯುವ ಪರಿಸ್ಥಿತಿಯಲ್ಲಿದೆ. 8.96 ಕಿಮೀ ಎತ್ತರಿಸಿದ ಮಾರ್ಗ (ಎಲಿವೆಟೆಡ್‌) ಹಾಗೂ 37.92ಕಿಮೀ ನೆಲಮಟ್ಟ ಸೇರಿ 46.24 ಕಿಮೀ ಉದ್ದದ ಈ ಕಾಮಗಾರಿ ಗುತ್ತಿಗೆ ಪಡೆದಿದ್ದ ಎಲ್‌ ಆ್ಯಂಡ್‌ ಟಿ ಕಂಪನಿ ಒಪ್ಪಂದದಿಂದ ಹಿಂದೆ ಸರಿದಿದೆ. ಮೂಲಗಳ ಪ್ರಕಾರ ಈ ತಿಂಗಳಲ್ಲೇ ಪರಿಷ್ಕೃತ ಟೆಂಡರ್‌ ಕರೆಯಲು ಕೆ- ರೈಡ್‌ ಸಿದ್ಧತೆ ಮಾಡಿಕೊಂಡಿದೆ.

2023ರ ಡಿಸೆಂಬರ್‌ನಲ್ಲಿ ಎಲ್‌ ಆ್ಯಂಡ್ ಟಿ ₹ 1040 ಕೋಟಿ ಮೊತ್ತದ ಈ ಟೆಂಡರ್‌ ಪಡೆದಿತ್ತು. 30 ತಿಂಗಳಲ್ಲಿ ಕಾಮಗಾರಿ ಮುಗಿಸುವ ಒಪ್ಪಂದವಾಗಿತ್ತು. ಆದರೆ, ಭೂಸ್ವಾಧೀನ ಹಸ್ತಾಂತರ ಸಮಸ್ಯೆ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿತ್ತು. ಆದರೆ, ಗುತ್ತಿಗೆ ಕಂಪನಿ ನಷ್ಟದ ಕಾರಣ ನೀಡಿ ಒಪ್ಪಂದದಿಂದ ಹಿಂದೆ ಸರಿದು, ನಷ್ಟ ಭರಿಸುವಂತೆ ಕೋರ್ಟ್‌ ಮೆಟ್ಟಿಲೇರಿದೆ.

ಅ. 6ರಂದು ಮಂಡಳಿ ಸಭೆಯಲ್ಲಿ ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ ಕಾಮಗಾರಿಯನ್ನು ಮೂರು ಪ್ಯಾಕೇಜ್‌ನಲ್ಲಿ ಟೆಂಡರ್‌ ಕರೆಯಲು ನಿರ್ಧಾರವಾಗಿದೆ. ಜತೆಗೆ ನವೆಂಬರ್‌ನಲ್ಲಿ ಕನಕ ಮಾರ್ಗದ ಕಾಮಗಾರಿಗೆ ಪರಿಷ್ಕೃತ ಟೆಂಡರ್‌ ಕರೆಯಲು ಮುಂದಾಗಿದೆ.

ಅರ್ಧಕ್ಕೆ ಬಿಟ್ಟ ಕಾಮಗಾರಿ:

ಇಲ್ಲಿ ಪ್ರಾಥಮಿಕ ಹಂತದ ಕಾಮಗಾರಿಗಳನ್ನು ಎಲ್‌ ಆ್ಯಂಡ್‌ ಟಿ ಮಾಡಿದೆ. ಮರ ಕಡಿಯುವುದು, ಮೂಲಸೌಲಭ್ಯಗಳ ಸ್ಥಳಾಂತರ ಚಾಲ್ತಿಯಲ್ಲಿದೆ. ಈ ಮಾರ್ಗದಲ್ಲಿ 16 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ. ಹತ್ತಕ್ಕೂ ಹೆಚ್ಚು ಕಿರು ಸೇತುವೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಎಲಿವೆಟೆಡ್‌ ಕಾರಿಡಾರ್‌ಗಾಗಿ ಪಿಲ್ಲರ್‌ ನಿರ್ಮಾಣದ ಆರಂಭಿಕ ಕೆಲಸಗಳು ಸ್ಥಗಿತಗೊಂಡಿದೆ.

ಮೂಲಗಳ ಪ್ರಕಾರ ಟೆಂಡರ್‌ ಕರೆಯುವಿಕೆ ಪ್ರಕ್ರಿಯೆ ನಡೆಯುತ್ತಿರುವಾಗಲೆ ಮೂರ್ನಾಲ್ಕು ಕಂಪನಿಗಳನ್ನು ಕೆ-ರೈಡ್‌ ಸಂಪರ್ಕಿಸಿದ್ದು, ಅವು ಕೂಡ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿವೆ ಎನ್ನಲಾಗಿದೆ. ಆದರೆ, ಅರ್ಧಕ್ಕೆ ಬಿಟ್ಟ ಕಾಮಗಾರಿಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಮುಂದುವರಿಸುವುದು ಕೂಡ ಸವಾಲಾಗಿದೆ. ಪುನಃ ಕಾಮಗಾರಿ ಆರಂಭವಾಗಲು ಇನ್ನೂ ನಾಲ್ಕಾರು ತಿಂಗಳು ಬೇಕಾಗಬಹುದು. ಹೀಗಾಗಿ ನಿಗದಿತ ಡೆಡ್‌ಲೈನ್‌ನಲ್ಲಿ ಕಾಮಗಾರಿ ನಡೆಯುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

PREV
Read more Articles on

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ