- ಎವಿಕೆ ರಸ್ತೆಯಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್‌ನ 23ನೇ ಶಾಖೆ ಉದ್ಘಾಟನೆ ಕಾರ್ಯಕ್ರಮ
ಮನೆಗಳಲ್ಲಿ ಪುಸಕ್ತಗಳನ್ನು ಅಲಂಕಾರಕ್ಕೆ ಸೀಮಿತವಾಗಿಡದೇ, ನಿಮ್ಮ ಜ್ಞಾನ, ತಿಳಿವಳಿಕೆ, ಅರಿವು ಹೆಚ್ಚಿಸಿಕೊಳ್ಳಲು ಅವುಗಳನ್ನು ಓದಬೇಕ. ಆ ಮೂಲಕ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಎವಿಕೆ ರಸ್ತೆಯಲ್ಲಿ ಶುಕ್ರವಾರ ಬೆಂಗಳೂರಿನ ಸಪ್ನ ಬುಕ್ ಹೌಸ್‌ನ 23ನೇ ಶಾಖೆ ಉದ್ಘಾಟಿಸಿ ನಂತರ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮನೆಗಳಲ್ಲಿ ಇರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಓದಿ, ಜ್ಞಾನ ಸಂಪಾದಿಸಿಕೊಳ್ಳಲೆಂಬ ಸದುದ್ದೇಶದಿಂದ ಸಾಹಿತಿಗಳು ಸ್ನೇಹಪೂರ್ವಕವಾಗಿ ಪುಸ್ತಕ ನೀಡುತ್ತಾರೆ. ಪುಸ್ತಕಗಳಲ್ಲಿ ಸಿಗುವ ಜ್ಞಾನ, ಅರಿವನ್ನು ನೀವು ಬಳಸುವ ಯಾವುದೇ ಅತ್ಯಾಧುನಿಕ ವಿಧಾನದಲ್ಲೂ ಸಿಗುವುದಿಲ್ಲ. ಸ್ನೇಹಪೂರ್ವಕವಾಗಿ ನಿಮಗೆ ನೀಡುವ ಪುಸ್ತಕಗಳು, ಖರೀದಿಸಿದ ಪುಸ್ತಕಗಳು ಅಥವಾ ಯಾರ ಬಳಿಯಾದರೂ ಎರವಲು ಪಡೆದ ಪುಸ್ತಕವಾಗಿರಲಿ, ಮೊದಲು ಅದನ್ನು ನೀವು ಓದಬೇಕು. ಆಗ ಮಾತ್ರ ಪುಸ್ತಕಗಳನ್ನು ಬರೆದ ಸಾಹಿತಿಗಳ ಶ್ರಮವು ಸಾರ್ಥಕವಾಗುತ್ತದೆ ಎಂದರು.
ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ ಮಾತನಾಡಿ, ಪೊಲೀಸ್ ಇಲಾಖೆಗೆ ಸಂಬಂಧಿಸಿದ 96 ಪುಸ್ತಕಗಳನ್ನು ಸಪ್ನ ಬುಕ್ ಹೌಸ್ ಪ್ರಕಾಶನದಡಿ ಪ್ರಕಟಿಸಿದ್ದಾರೆ. ಈ ಪುಸ್ತಕಗಳು ಅತ್ಯದ್ಭುತವಾಗಿವೆ. ಮಕ್ಕಳಿಗೆ ಓದುವ ಹವ್ಯಾಸವನ್ನು ಪಾಲಕರು ಬಾಲ್ಯದಿಂದಲೇ ಕಲಿಸಬೇಕು ಎಂದರು.
ಹಿರಿಯ ಸಾಹಿತಿ, ವಿದ್ವಾಂಸ ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಎಚ್.ಎನ್. ಕೃಷ್ಣ, ಸ್ವಪ್ನ ಬುಕ್ ಹೌಸ್ ಮಾಲೀಕರಾದ ನಿತಿನ್ ಶಾ, ನಿಜೇಶ್ ಶಾ, ವ್ಯವಸ್ಥಾಪಕ ದೊಡ್ಡೇಗೌಡ ಇತರರು ಇದ್ದರು. ಸಾಹಿತಿ ವತ್ಸಲಾ ಮೋಹನ್ ನಿರೂಪಣೆ ಮಾಡಿದರು. ಬಸಾಪುರ ಬಸವ ಕಲಾ ಲೋಕದ ಅರುಣ ಮತ್ತು ತಂಡದವರು ನಾಡಗೀತೆ ಹಾಡಿದರು.
- - - -13ಕೆಡಿವಿಜಿ14: ದಾವಣಗೆರೆಯಲ್ಲಿ ಸಪ್ನ ಬುಕ್ ಹೌಸ್ ಉದ್ಘಾಟಿಸಿದ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಂಸ್ಥೆ ಮಾಲೀಕ ನಿತಿನ್ ಶಾ, ನಾಡೋಜ ಪ್ರೊ.ಹಂ.ಪ.ನಾಗರಾಜಯ್ಯ ಶಾಖೆ ಬಗ್ಗೆ ವಿವರಿಸಿದರು.