ವಿಜ್ಞಾನ ಗ್ರಾಮ ಪರಿಕಲ್ಪನೆ ಅನುಷ್ಠಾನಕ್ಕೆ ಸಿದ್ದತೆ: ಹುಲಿಕಲ್ ನಟರಾಜ್

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ಆರ್.ರವಿ ಬಿಳಿಶಿವಾಲೆ ಶಿಡ್ಲಘಟ್ಟದ ಬಳಿ ನೀಡಿರುವ 10 ಎಕರೆ ಜಮೀನಿನಲ್ಲಿ ವಿಜ್ಞಾನ ಗ್ರಾಮ ನಿರ್ಮಾಣ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗುತ್ತಿದೆ. ವಿಜ್ಞಾನ ಗ್ರಾಮದಲ್ಲಿ 10 ಕೋಟಿ ರುಪಾಯಿ ವೆಚ್ಚದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಲಿದೆ
14, 15ಕ್ಕೆ ‘ನಾನೂ ನಾಯಕ’ ರಾಜ್ಯಮಟ್ಟದ ನಾಯಕತ್ವ ಶಿಬಿರ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಅಕ್ಟೋಬರ್ 14 ಮತ್ತು 15ರಂದು ಎರಡು ದಿನಗಳ ಕಾಲ ‘ನಾನೂ ನಾಯಕ’ ರಾಜ್ಯ ಮಟ್ಟದ ನಾಯಕತ್ವ ಶಿಬಿರವನ್ನು ದೊಡ್ಡಬಳ್ಳಾಪುರದ ಬೆಸೆಂಟ್‌ ಪಾರ್ಕಿನಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ತಿಳಿಸಿದರು. ಇಲ್ಲಿನ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಮಾಹಿತಿ ನೀಡಿದರು. ವೈಜ್ಞಾನಿಕ ಸಂಶೋಧನಾ ಪರಿಷತ್, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್‌ಕುಮಾರ್ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಹಂತದಲ್ಲಿ ಸಮಿತಿಗಳನ್ನು ರಚಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಸದಸ್ಯರನ್ನು ಹೊಂದಿದೆ ಎಂದು ವಿವರಿಸಿದರು. ವಿಜ್ಞಾನ ಗ್ರಾಮ ಪರಿಕಲ್ಪನೆ ಅನುಷ್ಠಾನ: ಪ್ರತಿ ವರ್ಷ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ, ಕಾಯಕ ದಿನ, ರಾಜ್ಯಮಟ್ಟದ ಪುರಸ್ಕಾರ ಪ್ರದಾನ, ನಾಯಕತ್ವ ಶಿಬಿರಗಳನ್ನು ಆಯೋಜಿಸುವುದರ ಜತೆಗೆ ಪ್ರತಿ ತಿಂಗಳ ಅಮಾವಾಸ್ಯೆಯಂದು ಅಮೃತಾ ಅಮಾವಾಸ್ಯೆ ವರ್ಚುವಲ್‌ ಕಾರ್ಯಕ್ರಮ ನಡೆಸುತ್ತಿದೆ. ಅಲ್ಲದೇ ಸಂಸ್ಥೆಯು ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ಆರ್.ರವಿ ಬಿಳಿಶಿವಾಲೆ ಶಿಡ್ಲಘಟ್ಟದ ಬಳಿ ನೀಡಿರುವ 10 ಎಕರೆ ಜಮೀನಿನಲ್ಲಿ ವಿಜ್ಞಾನ ಗ್ರಾಮ ನಿರ್ಮಾಣ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗುತ್ತಿದೆ. ವಿಜ್ಞಾನ ಗ್ರಾಮದಲ್ಲಿ 10 ಕೋಟಿ ರುಪಾಯಿ ವೆಚ್ಚದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಲಿದೆ ಎಂದು ತಿಳಿಸಿದರು. ನಾಯಕತ್ವ ಶಿಬಿರದಲ್ಲಿ ಗಣ್ಯರು ಭಾಗಿ: ಈ ನಿಟ್ಟಿನಲ್ಲಿ ರಾಜ್ಯಮಟ್ಟದ ನಾಯಕತ್ವ ಶಿಬಿರವನ್ನು ಅ.14 ಮತ್ತು 15 ರಂದು ಆಯೋಜಿಸಿದ್ದು ಶಿಬಿರವನ್ನು ಇಸ್ರೋದ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಉದ್ಘಾಟಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಜ್ಞಾನ ಗ್ರಾಮದ ನೀಲ ನಕ್ಷೆ ಬಿಡುಗಡೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ವಿಜ್ಞಾನ ಗ್ರಾಮ ಭೂಮಿಯ ಹಸ್ತಾಂತರ ಮಾಡಲಿದ್ದಾರೆ. ಶಾಸಕ ಧೀರಜ್ ಮುನಿರಾಜ್ ಪರಿಷತ್ತಿನ ಉದ್ದೇಶ ಪುಸ್ತಕವನ್ನು ಬಿಡುಗಡೆ ಮಾಡಲಿದ್ದು, ನಮ್ಮ ಸಂವಿಧಾನ ನಮ್ಮ ಹಕ್ಕು ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮಾತನಾಡಲಿದ್ದಾರೆ ಎಂದರು. ಡಾ.ಆಂಜನಪ್ಪ, ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ.ಚೇತನ್ ರಾಮ್, ಡಾ.ತಿಮ್ಮೇಶ್ ಹಾಸನ, ಯಮದೂರು ಸಿದ್ದರಾಜ್, ವೈ.ಎನ್.ಶಂಕರೇಗೌಡ, ಡಾ.ಸಿ.ಸೋಮಶೇಖರ್, ಡಾ.ಪಲ್ಲವಿ, ಇಂದುಮತಿ ಸಾಲಿಮಠ, ವಿಜಯಲಕ್ಷ್ಮೀ ಶಿಬರೂರು, ಡಾ.ಜಿ.ಎಸ್.ಶ್ರೀಧರ್, ಡಾ.ಮಲ್ಲಿಕಾ ಘಂಟೆ, ಡಾ.ಎಚ್.ಎಸ್.ಅನುಪಮ ಮೊದಲಾದವರು ಭಾಗವಹಿಸಲಿದ್ದಾರೆ. 15ರಂದು ಸಮಾರೋಪ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಪಾಲ್ಗೊಳ್ಳುವರು ಎಂದು ವಿವರಿಸಿದರು. ಚಿಕ್ಕಹನುಮಂತೇ ಗೌಡ, ಕೆ.ಪಿ.ಲಕ್ಷ್ಮೀನಾರಾಯಣ, ಆರ್.ಎಸ್.ಮಂಜುನಾಥ್, ಡಾ.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article