ಅಮೃತ ಸರೋವರ ದಡದಲ್ಲಿ ಸಂವಿಧಾನ ಪೀಠಿಕೆ ವಾಚನ

KannadaprabhaNewsNetwork | Published : Nov 28, 2024 12:33 AM

ಸಾರಾಂಶ

ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲನಿ ಅಮೃತ ಸರೋವರ ದಡದಲ್ಲಿ ಸಂವಿಧಾನ ದಿನದ ನಿಮಿತ್ತ ಸಂವಿಧಾನದ ಪೀಠಿಕೆ ವಾಚನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲನಿ ಅಮೃತ ಸರೋವರ ದಡದಲ್ಲಿ ಸಂವಿಧಾನ ದಿನದ ನಿಮಿತ್ತ ಸಂವಿಧಾನದ ಪೀಠಿಕೆ ವಾಚನ ಮಾಡಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರ ಸಂವಿಧಾನ ದಿನ ಆಚರಿಸಲಾಯಿತು.

ಜನತಾ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಸಂತೋಷ ಸಂವಿಧಾನ ಪೀಠಿಕೆ ಓದಿಸುವ ಮೂಲಕ ಗಮನ ಸೆಳೆದನು.

ಗ್ರಾಪಂ ಪಿಡಿಒ ಪ್ರಕಾಶ ಹೀರೆಮಠ ಮಾತನಾಡಿ, ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದರು.

ಈ ಸಂದರ್ಭ ಗ್ರಾಪಂ ಸದಸ್ಯರಾದ ರವಿಕುಮಾರ್, ಯಮನೂರಪ್ಪ, ಐಇಸಿ ಸಂಯೋಜಕ ಸೋಮನಾಥ ಗೌಡರ್, ಗ್ರಾಮದ ಭೀಮಣ್ಣ ಭೋವಿ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ್, ಬಿಎಫ್ಟಿ ಮುದಕಪ್ಪ, ಗ್ರಾಪಂ ಸಿಬ್ಬಂದಿ, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

ಪುರಸಭೆ:

ಕಾರಟಗಿ ಪುರಸಭೆಯಲ್ಲಿ ಬೆಳಗ್ಗೆ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು. ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ದೇಶದ ಸಂವಿಧಾನದ ಪ್ರಾಮುಖ್ಯತೆ ಕುರಿತು ವಿವರಿಸಿದರು.

ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಪೀಠಿಕೆ ಬೋಧಿಸಿದರು. ಈ ವೇಳೆ ನಾಗರಾಜ ಚೆಳ್ಳೂರು, ರಾಘವೇಂದ್ರ, ಆದೆಪ್ಪ ಸೇರಿದಂತೆ ಇತರರು ಇದ್ದರು.

ತಾಪಂ ಕಚೇರಿ:

ಇಲ್ಲಿನ ನವಲಿ ರಸ್ತೆಯ ತಾಪಂ ಕಚೇರಿಯಲ್ಲಿ ಬೆಳಗ್ಗೆ ಡಾ. ಬಿ.ಆರ್‌. ಅಂಬೇಡ್ಕರ್ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾರತ ಸಂವಿಧಾನ ದಿನ ಆಚರಿಸಲಾಯಿತು. ತಾಪಂ ಇಒ ಲಕ್ಷ್ಮೀದೇವಿ ಪೀಠಿಕೆ ಬೋಧಿಸಿದರು. ಸಹಾಯಕ ನಿರ್ದೇಶಕಿ ವೈ. ವನಜಾ ಸೇರಿದಂತೆ ವಿವಿಧ ಯೋಜನೆಗಳ ನಿರ್ವಾಹಕರು ಇದ್ದರು.

ಸಿದ್ದಾಪುರ:

ಇಲ್ಲಿನ ಕಸ್ತೂರಿ ಬಾ ಗಾಂಧಿ ಬಾಲಿಕಾ ಉರ್ದು ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ವಿಶೇಷತೆಯನ್ನು ತಿಳಿಸಲಾಯಿತು. ಮುಖ್ಯಗುರು ಚಂದ್ರಶೇಖರ ಗಣವಾರಿ ಸಂವಿಧಾನ ಪೀಠಿಕೆ ಬೋಧಿಸಿದರು.

Share this article