- ಗುಡಿ ಬಗ್ಗೆ ಅಪಪ್ರಚಾರ ಮಾಡಬೇಡಿ, ಭಕ್ತರನ್ನು ದಾರಿ ತಪ್ಪಿಸಬೇಡಿ, ರಾಜಕೀಯ ತರಬೇಡಿ: ಎಚ್.ಬಿ.ಗೋಣೆಪ್ಪ - - -
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಯಾವುದೇ ಅಕ್ರಮ, ಅವ್ಯವಹಾರ ಆಗಿಲ್ಲ. ಯಾವುದೇ ಕಾರಣಕ್ಕೂ ಭಕ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ದೇವಸ್ಥಾನ ಧರ್ಮದರ್ಶಿಗಳ ಸಮಿತಿ ಧರ್ಮದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಸಮಿತಿ ಸದಸ್ಯರು, ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್ ಇತರರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಗ್ಗಮ್ಮ ದೇವಸ್ಥಾನಕ್ಕೆ ಭಕ್ತರು ನೀಡುವ ಉಡಕ್ಕಿ ಸಾಮಾನುಗಳು ದೇವಸ್ಥಾನದ ಪೂಜಾರರಿಗೆ ಸಲ್ಲುತ್ತದೆ. ಭಕ್ತರು ಸೀರೆ, ಬೆಳ್ಳಿ, ಚಿನ್ನ, ನಗದು ನೀಡಿದರೆ ಅದಕ್ಕೆ ದೇವಸ್ಥಾನ ಸಮಿತಿಯಿಂದ ಅಧಿಕೃತವಾಗಿಯೇ ರಸೀದಿ ನೀಡುತ್ತಿದ್ದು, ಯಾವುದೇ ಅನುಮಾನಗಳಿದ್ದರೆ ಯಶವಂತ ರಾವ್ ಹೇಳುವ ದಿನಾಂಕ, ಸಮಯಕ್ಕೆ ದೇವಸ್ಥಾನದಲ್ಲೇ ದಾಖಲೆ ಸಮೇತ ವಿವರ ನೀಡಲು ನಾವು ಸಿದ್ಧರಿದ್ದೇವೆ ಎಂದರು.ಪ್ರತಿ ಮಂಗಳವಾರ, ಶುಕ್ರವಾರ ಅನ್ನ ಸಂತರ್ಪಣೆ, ಸಿಹಿ ಪ್ರಸಾದ ಸೇವೆಯು ಭಕ್ತರು ದಾಸೋಹಕ್ಕೆ ನೀಡುವ ಹಣದಲ್ಲಿ ನಡೆಯುತ್ತದೆ. ಪ್ರಸಾದ ಸೇವೆ ಆರಂಭವಾದಾಗಿನಿಂದಲೂ ದಿವಂಗತ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಸಿಹಿ ಪ್ರಸಾದ ಸೇವೆ ಇರುತ್ತದೆ. ಸಿಹಿ ಪ್ರಸಾದ ಹೊರತುಪಡಿಸಿ, ಉಳಿದೆಲ್ಲಾ ಪ್ರಸಾದಕ್ಕೆ ಭಕ್ತರು ದಾಸೋಹಕ್ಕೆ ನೀಡಿದ ಹಣವನ್ನೇ ಸಮಿತಿ ಬಳಕೆ ಮಾಡುತ್ತಿದೆ. ಅಕ್ಕಿ, ಬೇಳೆ, ಬೆಲ್ಲವನ್ನು ಭಕ್ತರು ಕೊಡುತ್ತಿದ್ದು, ಅದನ್ನೂ ಬಳಸಲಾಗುತ್ತದೆ. ಉಳಿದ ಅಕ್ಕಿ, ಬೆಲ್ಲ ಮಾರಾಟ ಮಾಡಿ, ಬಂದ ಹಣವನ್ನು ದೇವಸ್ಥಾನ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಯಶವಂತ ರಾವ್ ಜಾಧವ್ ದೇವಸ್ಥಾನದಲ್ಲಿ ಅವ್ಯವಹಾರ ಆಗಿದೆಯೆಂಬ ಆರೋಪ ಮಾಡಿದ್ದು, ಯಾವಾಗ ಬೇಕಾದರೂ ದಿನಾಂಕ, ಸಮಯ ನಿಗದಿಪಡಿಸಿ, ದೇವಸ್ಥಾನಕ್ಕೆ ಬಂದರೆ ಲೆಕ್ಕ ನೀಡಲು ನಾವೆಲ್ಲರೂ ಸಿದ್ಧರಿದ್ದೇವೆ. ಯಾವುದೇ ಮಾಹಿತಿ ನೀಡುವುದಕ್ಕೂ ನಾವು ತಯಾರಿದ್ದೇವೆ. ದೇವಸ್ಥಾನ ಅಭಿವೃದ್ಧಿ ವಿಚಾರವಾಗಿ ಯಶವಂತ ರಾವ್ ಸೇರಿದಂತೆ ಯಾವುದೇ ಸೂಕ್ತ ಸಲಹೆ, ಸೂಚನೆ ನೀಡಿದರೂ ನಾವು ಅದು ಸೂಕ್ತವೆನಿಸಿದರೆ ಅಳವಡಿಸಿಕೊಳ್ಳುತ್ತೇವೆ. ಅಮ್ಮನ ಸೇವೆಯಲ್ಲಿ ತೊಡಗಿರುವವರು ನಾವು. ಲೆಕ್ಕ ಕೊಡಲು ನಾವೆಲ್ಲರೂ ಸಿದ್ಧರಾಗಿದ್ದೇವೆ ಎಂದು ಪುನರುಚ್ಛರಿಸಿದರು.
ಸಮಿತಿ ಧರ್ಮದರ್ಶಿಗಳಾದ ಸಾಳಂಕಿ ಉಮೇಶ, ಮುದೇಗೌಡ್ರ ವಿಶ್ವನಾಥ, ಜೆ.ಎನ್. ಹನುಮಂತ ರಾವ್ ಜಾಧವ್, ರಾಮಕೃಷ್ಣ ಬಡಗಿ, ಶಂಕರ ರಾವ್ ಶಿಂಧೆ, ಸುರೇಶ ಕಳಸಪ್ಪನವರ್, ಗುರುರಾಜ ಸೊಪ್ಪಿನ, ಕಾರ್ಯಕರ್ತ ಬಾಬುರಾವ್ ಇತರರು ಇದ್ದರು.
(ಕೋಟ್) ದಾವಣಗೆರೆ ದುಗ್ಗಮ್ಮ ದೇವಸ್ಥಾನದ ಧರ್ಮದರ್ಶಿ ಸಮಿತಿ ವಿರುದ್ಧ ಅವ್ಯವಹಾರದ ಆರೋಪ ಮಾಡಿರುವ ಯಶವಂತ ರಾವ್ ಜಾಧವ್ ನಾಳೆಯೇ ದೇವಸ್ಥಾನಕ್ಕೆ ಬಂದರೆ ಎಲ್ಲಾ ದಾಖಲೆ, ಲೆಕ್ಕಪತ್ರ ನೀಡಲು ನಾವು ಸಿದ್ಧರಿದ್ದೇವೆ. ರಾಜಕೀಯ ವಿಚಾರಕ್ಕೆ ದೇವಸ್ಥಾನದ ವಿರುದ್ಧ ಆರೋಪ ಮಾಡಿ, ಭಕ್ತರಿಗೆ, ಜನರಿಗೆ ತಪ್ಪು ಸಂದೇಶ ನೀಡುವುದು ಬೇಡ. ನಿಮಗೆ ಯಾವುದೇ ಅನುಮಾನ, ಪ್ರಶ್ನೆ ಇದ್ದರೂ ದಾಖಲೆ ಸಮೇತ ವಿವರಣೆ ನೀಡಲು ನಾವು ಸಿದ್ಧ. ಶ್ರೀರಾಮ ಮಂದಿರ, ಬೆಳ್ಳಿ ಇಟ್ಟಿಗೆ ವಿಚಾರ ನಮಗೆ ಬೇಡವಾದ ವಿಷಯ. ದುಗ್ಗಮ್ಮ ಗುಡಿ ಬಗ್ಗೆ ನಾವು ಏನೇ ಇದ್ದರೂ ಚರ್ಚೆಗೆ ಸಿದ್ಧರಿದ್ದೇವೆ.
- - -