ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಬೆಳೆಗೆ ತಕ್ಷಣವೇ ನೀರು ಹರಿಸದಿದ್ದರೆ ಕೋಟ್ಯಂತರ ರು. ಮೌಲ್ಯದ ಕಬ್ಬು ಬೆಳೆ ನಷ್ಟವಾಗಲಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆತಂಕ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ತಾಲೂಕಿನ ತಗ್ಗಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಹಲವು ವಿಷಯ ಚರ್ಚಿಸಿ ಮಾತನಾಡಿ, ಜಿಲ್ಲೆಯಲ್ಲಿ 37 ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಅದನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಹಠಮಾರಿ ಧೋರಣೆ ಕೈಬಿಡಬೇಕು. ತಕ್ಷಣವೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕಬ್ಬು ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿದರು.

ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಕುಡಿಯುವ ನೀರು ಮುಖ್ಯವಾದರೂ ರೈತರನ್ನು ಉಳಿಸುವ ಕೆಲಸವೂ ಆಗಬೇಕಿದೆ. ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆಯ ಒಳಹರಿವಿನಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಆದ್ದರಿಂದ ಒಂದು ಕಟ್ಟು ನೀರು ಹರಿಸಿದರೆ ಕೋಟ್ಯಂತರ ರು. ಮೌಲ್ಯದ ಬೆಳೆ ಹಾಳಾಗುವುದು ತಪ್ಪುತ್ತದೆ ಎಂದರು.

ಜಿಲ್ಲೆಯಲ್ಲಿ ಸುಮಾರು 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕಟಾವು ಹಂತದಲ್ಲಿದೆ. 24 ಸಾವಿರ ಹೆಕ್ಟೇರ್‌ನಲ್ಲಿ 8 ರಿಂದ 12 ತಿಂಗಳ ಅವಧಿಯ ಕಬ್ಬು ಹಾಗೂ ಮೂರೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12 ತಿಂಗಳ ಕಬ್ಬು ಇದೆ. ಮಳೆಯಾಗದೇ ಹಾಗೂ ನೀರಿಲ್ಲದೆ ಒಣಗುತ್ತಿವೆ. ಮಾತ್ರವಲ್ಲದೆ ಇಳುವರಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಈ ಬೆಳೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಶೇ.50ಕ್ಕಿಂತ ಹೆಚ್ಚು ಕಬ್ಬು ಬೆಳೆ ಸಂಪೂರ್ಣ ನಾಶವಾಗುವ ಜತೆಗೆ ಸಾಲ ಮಾಡಿದ ಬೆಳೆ ಬೆಳೆದ ರೈತರಿಗೆ ಕೋಟ್ಯಂತರ ರು. ನಷ್ಟವಾಗುತ್ತದೆ. ಇಷ್ಟೇ ಅಲ್ಲದೇ, ಕಟಾವು ಹಂತದಲ್ಲಿರುವ ಕಬ್ಬನ್ನು ನುರಿಸುವ ನಿಟ್ಟಿನಲ್ಲಿಯೂ ಜಿಲ್ಲಾಡಳಿತ ತುರ್ತು ಕ್ರಮ ವಹಿಸಲೇಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಇಂದು ಮೈಷುಗರ್ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ

ಮಂಡ್ಯ: ೨೦೨೬-೨೭ನೇ ಸಾಲಿನ ಕಬ್ಬು ಅರೆಯುವಿಕೆ ಹಿನ್ನೆಲೆಯಲ್ಲಿ ಮೈಸೂರು ಸಕ್ಕರೆ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಕಾರ್ಯಕ್ರಮವನ್ನು ಬುಧವಾರ (ಜು.೮) ಬೆಳಗ್ಗೆ ೯ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಶಾಸಕರು, ಮೈಷುಗರ್ ಕಾರ್ಖಾನೆಯ ಹಿತೈಷಿಗಳು, ರೈತಬಂಧುಗಳು, ನಾಗರಿಕರು ಆಗಮಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.