ಕನ್ನಡಪ್ರಭ ವಾರ್ತೆ ಮಂಡ್ಯ

ಪತಿಯ ಜಮೀನು ಪತ್ನಿ ಹೆಸರಿಗೆ ಪೌತಿಖಾತೆ ಮಾಡದ ಕೆ.ಆರ್.ಪೇಟೆ ತಹಸೀಲ್ದಾರ್ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾ ಮಾಡುವಂತೆ ಒತ್ತಾಯಿಸಿ ಜು.೯ರಂದು ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ದಲಿತ ಸಂಘರ್ಷ ಸಮಿತಿಯ ದೇವರಾಜು ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ನೀಡಲಾದ ದರಕಾಸ್ತು ಜಮೀನನ್ನು ಪತಿಯ ಸಾವಿನ ನಂತರ ಚೌಡಮ್ಮ ಹೆಸರಿಗೆ ಮಾಡಲು ಅನಗತ್ಯ ತೊಂದರೆ ನೀಡಲಾಗುತ್ತಿದೆ. ಇದು ಅಧಿಕಾರಿಗಳ ಜಾತಿವಾದಿತನ, ದನದಾಹಿ, ದಲಿತ ವಿರೋಧಿ ನೀತಿಯನ್ನು ತೋರುತ್ತದೆ ಎಂದು ಆರೋಪಿಸಿದರು.

ಈ ಸಂಬಂಧ ರಾಜಸ್ವ ನಿರೀಕ್ಷಕಿ ಚಂದ್ರಕಲಾ ಅವರು ಪಾಂಡವಪುರ ಉಪವಿಭಾಗಾಧಿಕಾರಿ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ ತಹಸೀಲ್ದಾರ್ ಅವರಿಗೆ ತಪ್ಪಾದ ವರದಿ ನೀಡಿದ್ದಾರೆ. ಇದರಿಂದ ಹಾಲಿ ಉಪವಿಭಾಗಾಧಿಕಾರಿಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರದ ಪಿಟಿಸಿಎಲ್ ಪ್ರಕರಣವಾಗಿ ಪರಿಗಣಿಸಿ ಆದೇಶ ನೀಡಿದ್ದಾರೆ ಎಂದು ದೂರಿದರು.

ಈ ಹಿಂದೆ ಇದ್ದ ಉಪವಿಭಾಗಾಕಾರಿಗಳ ಆದೇಶ ಧಿಕ್ಕರಿಸಿ ಪಿಟಿಸಿಎಲ್ ಕಾಯ್ದೆಯ ಅರಿವಿಲ್ಲದೇ ಗಂಡನ ಜಮೀನನ್ನು ಪೌತಿಕಾತೆ ಮಾಡದೇ ಕಾನೂನು ಬಾಹಿರವಾಗಿ ತಹಸೀಲ್ದಾರ್ ಮತ್ತು ಪಾಂಡವಪುರ ಹಾಲಿ ಉಪವಿಭಾಗಾಧಿಕಾರಿಗಳು ತಮ್ಮ ಕೇಸ್‌ವರ್ಕರ್ ಪುನೀತ್ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಯಿಂದ ತನಿಖೆ ನಡೆಸಬೇಕು. ಕಾನೂನು ವಿರೋಧಿ ನೀತಿ ಅನುಸರಿಸುತ್ತಿರುವ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹಾಗೂ ತಹಸೀಲ್ದಾರ್ ಉಮಾಮಹೇಶ್ವರಪ್ಪ ಅಶೋಕ, ಕೇಸ್‌ವರ್ಕರ್ ಪುನೀತ್, ಬೂಕನಕೆರೆ ರಾಜಸ್ವ ನಿರೀಕ್ಷಕಿ ಚಂದ್ರಕಲಾ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.


ಗೋಷ್ಠಿಯಲ್ಲಿ ರಮೇಶ್, ಗಂಗಾಧರ್, ಚೌಡಮ್ಮ, ಶಿವಲಿಂಗಯ್ಯ ಇತರರಿದ್ದರು.

ಕೆ.ವಿ.ಅಮರ್‌ನಾಥ್‌ಗೆ ವಿಧಾನಪರಿಷತ್ ಸ್ಥಾನಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ಮಂಡ್ಯಕಾಂಗ್ರೆಸ್ ಪಕ್ಷದಲ್ಲಿರುವ ಮಡಿವಾಳ ಸಮುದಾಯದ ಕೆ.ವಿ.ಅಮರ್‌ನಾಥ್ ಅವರಿಗೆ ರಾಜ್ಯ ಸರ್ಕಾರವು ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ.ಟಿ.ಗುರುರಾಜ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.೨೫ ರಂದು ೫ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಗಳು ಖಾಲಿಯಾಗಲಿವೆ. ಅದರಲ್ಲಿ ಒಂದು ಸ್ಥಾನವನ್ನು ಮಡಿವಾಳ ಸಮುದಾಯಕ್ಕೆ ನೀಡಲು ಮುಂದಾಗಬೇಕು ಎಂದರು.ರಾಜ್ಯದಲ್ಲಿ ಬಿಜೆಪಿ ಪಕ್ಷ ಮಡಿವಾಳ ಸಮುದಾಯದವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮುದಾಯಕ್ಕೆ ಈ ರೀತಿಯ ರಾಜಕೀಯ ಅವಕಾಶ ನೀಡಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ತುಮಕೂರು ಜಿಲ್ಲೆಯಲ್ಲಿ ಮಡಿವಾಳರ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಸಮುದಾಯಕ್ಕೆ ಒಂದು ಎಂಎಲ್‌ಸಿ ಸ್ಥಾನ ನೀಡಿ, ವಿಧಾನಸಭೆಗೆ ಅವಕಾಶ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು ಎಂದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಮಡಿವಾಳ ಸಮುದಾಯ ಸಂಪೂರ್ಣ ಬೆಂಬಲ ನೀಡಿದೆ. ಆದ್ದರಿಂದ ಕೆ.ವಿ.ಅಮರ್‌ನಾಥ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಗೋಷ್ಠಿಯಲಿ ಜಿಲ್ಲಾ ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್.ರವಿ, ಮುಖಂಡರಾದ ಗೋವಿಂದಪ್ಪ, ಕೃಷ್ಣ, ಶಿವಲಿಂಗಯ್ಯ, ಶಂಕರಪ್ಪ, ನಾರಾಯಣ ಇತರರಿದ್ದರು.