ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಬರದ ಬೇಗೆಯ ನಡುವೆಯೂ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ತುಂಗೆ ಭರ್ಜರಿ ಪ್ರವೇಶ ಕೊಟ್ಟಿದ್ದಾಳೆ. ಭದ್ರಾ ಬರುವುದಕ್ಕೂ ಮೊದಲೇ ಹಾಜರಿ ಹಾಕಿರುವ ತುಂಗೆ ಭರಮಣ್ಣನಾಯಕನ ಕೆರೆಯಲ್ಲಿ ದುಮ್ಮಿಕ್ಕುವುದರ ಮೂಲಕ ಭವಿಷ್ಯದಲ್ಲಿ ತನ್ನೊಡಲ ಮಕ್ಕಳ ಸಾಕುವ ಭರವಸೆ ನೀಡಿದ್ದಾಳೆ.

ಮುಂಗಾರು ಕೊರತೆಯಿಂದ ಕೃಷಿಕರು ಮುಗಿಲಿಗೆ ಮುಖಮಾಡಿ ಮಳೆಯ ಆಗಮನಕ್ಕಾಗಿ ಕಾಯುತ್ತಿರುವಾಗಲೆ ದೂರದಿಂದ ಹರಿದು ಬಂದ ತುಂಗೆಯ ರಸಗಂಗೆ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯನಕೆರೆಗೆ ಪಾದಾರ್ಪಣೆ ಮಾಡಿ ಎಲ್ಲರ ಮೊಗದಲ್ಲಿ ಸಂಭ್ರಮದ ಸಿಂಚನ ಮೂಡಿಸಿದ್ದಾಳೆ.

ಭರಮಸಾಗರದಲ್ಲಿ ದೊಡ್ಡಕೆರೆ ಎಂದೇ ಖ್ಯಾತವಾಗಿರುವ ಇದು 1000 ಎಕರೆ ಭೂಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಬತ್ತಿ ಹೋಗಿದ್ದ ಈ ಕೆರೆಗೆ ನೀರು ತರುವಲ್ಲಿ ಸರ್ಕಾರದೊಂದಿಗೆ ಹೋರಾಟ ಮಾಡಿ ಜಲಗಂಗೆಯನ್ನು ಹೊತ್ತು ತಂದವರು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರ ದೂರದೃಷ್ಟಿಯ ಯೋಜನೆಯಿಂದ ಭರಮಸಾಗರ ಹೋಬಳಿ ವ್ಯಾಪ್ತಿಯ ಭೂಪ್ರದೇಶ ಹಸುರಿನ ಹೊನ್ನಗರಿಯಂತಾದುದು ಇತಿಹಾಸವೇ ಸರಿ.


43 ಕೆರೆಗಳಿಗೆ ನೀರು ಉಣ್ಣಿಸುವ ಬಹು ದೊಡ್ಡ ಯೋಜನೆ ಇದು. ಇದಕ್ಕಾಗಿ ಸರ್ಕಾರ ವ್ಯಯ ಮಾಡಿರುವುದು ಬರೋಬ್ಬರಿ 625 ಕೋಟಿ ರು. ಇಂತಹ ಯೋಜನೆಯ ಮೇಲೂ ಈ ಬಾರಿ ಬರದ ಛಾಯೆ ಮೂಡಿತೇನೋ ಅನುಮಾನ ಕೃಷಿಕರ ಮನದಲ್ಲಿ ಮೂಡುವ ಮೊದಲೇ ಶಿವಮೊಗ್ಗ ಜಿಲ್ಲೆಯ ಗಾಜನೂರಿನಿಂದ ಧಾವಿಸಿ ಬಂದು ಭರಮಸಾಗರದ ಕೆರೆಯಲ್ಲಿ ಜಲಧಾರೆಯಾಗಿ ರೂಪುಗೊಂಡಿದ್ದಾಳೆ ತುಂಗೆ.

ಆರಿದ್ರಾ ಮಳೆ ರೈತರಿಗೆ ಭಾಷೆ ಕೊಟ್ಟ ಮಳೆ. ಅದೂ ತನ್ನ ಇರುವು ತೋರಿಸದೇ ಇದ್ದಾಗ ಇನ್ನೇನು ಈ ವರ್ಷ ಬರವೇ ಗತಿ ಎಂದು ಭಾವಿಸಿದ್ದರು ಕೃಷಿಕರು. ಮಲೆನಾಡ ಭಾಗದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತುಂಬಿದ ತುಂಗೆ ಅಣೆಕಟ್ಟೆಯಿಂದ ಹರಿದು ಬಂದ ನೀರು ಹರಿಹರ ಸಮೀಪದ ದೀಟೂರು ತಲುಪುತ್ತಲೆ ಭರಮಸಾಗರ ಏತ ನೀರಾವರಿ ಯೋಜನೆಯ ತಂಡ ಕಾರ್ಯಪ್ರವೃತ್ತವಾದ ಕಾರಣ ನೀರು ಸರಾಗವಾಗಿ ಬರುವಂತಾಗಿದೆ.

ತರಳಬಾಳು ಶ್ರೀಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿರುವ ತಂಡ ಸೋಮವಾರ ಬೆಳಗ್ಗೆ ಹರಿಹರ ಸಮೀಪದ ತುಂಗಾಭದ್ರಾ ನದಿ ತೀರದಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಗಮನಿಸಿ, ಭರಮಸಾಗರ ಏತ ನೀರಾವರಿ ಯೋಜನೆಯ ಜ್ಯಾಕ್‌ವೆಲ್‌ ಪರಿಶೀಲನೆ ಮಾಡಿ ಅಲ್ಲಿ ಅಳವಡಿಸಲಾಗಿರುವ ಮೋಟಾರ್‌ಗಳಲ್ಲಿ ಒಂದನ್ನು ಪ್ರಾಯೋಗಿಕವಾಗಿ ಚಾಲು ಮಾಡಿದರು. ಪರಿಣಾಮ ನೀರು ಸರಾಗವಾಗಿ ಭರಮಸಾಗರ ಕೆರೆ ಮುಟ್ಟಿದೆ. ನಂತರದಲ್ಲಿ ಮತ್ತೊಂದು ಮೋಟಾರು ಚಾಲು ಮಾಡಲಾಗಿದೆ. ನೀರು ರಭಸವಾಗಿ ಹರಿದು ಕೆರೆಯಂಗಳದಲ್ಲಿ ಚಿಮ್ಮಿದ್ದು ನೋಡುಗರಿಗೆ ಹರ್ಷವನ್ನುಂಟು ಮಾಡಿದೆ.

ಕೆರೆಗೆ ನೀರು ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೃಷಿಕರು ಕೆರೆ ಏರಿಗೆ ಧಾವಿಸಿ ನೀರು ಬರುವ ದೃಶ್ಯವನ್ನು ನೋಡಿ ಸಂತಸಪಟ್ಟಿದ್ದಾರೆ. ವಾಹನ ಸವಾರರು ಹರಿದು ಬಂದ ಗಂಗೆಗೆ ಮನದಲ್ಲಿಯೇ ನಮನ ಸಲ್ಲಿಸಿದ್ದಾರೆ. ಮೂರು ತಿಂಗಳ ಕಾಲ ನದಿ ತೀರದಿಂದ ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗೆ ನೀರು ತುಂಬಿಸಬಹುದಾಗಿದ್ದು, ಈ ಹಂಗಾಮಿನಲ್ಲಿ ಸಮಿತಿ ಕಾರ್ಯೋನ್ಮುಖವಾದರೆ ಬರುವ ಬೇಸಿಗೆಯನ್ನು ಎದುರಿಸಬಹುದಾಗಿದೆ.

ಬರಿದಾಗಿದ್ದ ಕೆರೆಗೆ ಮೂರು ವರ್ಷಗಳ ಹಿಂದೆ ನೀರು ಬಂದ ನಂತರ ಈ ಭಾಗದ ಕೃಷಿ ಚಟುವಟಿಕೆಗಳು ವಿಸ್ತಾರಗೊಂಡವು. ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಾಗಿದ್ದ ರೈತರು ಹಲವು ಬಗೆಯ ತೋಟಗಾರಿಕೆ ಬೆಳೆ, ಹಣ್ಣು ಹಂಪಲು, ತರಕಾರಿ ಬೆಳೆಯಲು ಮುಂದಾದರು ಅಡಿಕೆ ತೋಟಗಳಂತೂ ನಿರೀಕ್ಷೆಗೆ ಮೀರಿ ವಿಸ್ತರಿಸಿಕೊಂಡವು. ಎಲ್ಲಿ ನೋಡಿದರೂ ಅಡಿಕೆ ಸಸಿಗಳೇ ನಳನಳಿಸಿದ್ದವು. ತರಹೆವಾರಿ ಕೃಷಿಯಲ್ಲಿ ರೈತರು ತಮ್ಮನ್ನು ತೊಡಗಿಸಿಕೊಂಡರು.