ಕಡೂರಿನಲ್ಲಿ ಸುರುಚಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ಕನ್ನಡಪ್ರಭ ವಾರ್ತೆ, ಕಡೂರು ನಾನು ಶಾಸಕನಾದ ನಂತರ ಕಡೂರು ಕ್ಷೇತ್ರಕ್ಕೆ ತಂದಿರುವ ಅನುದಾನದ ವಿವರ ತಿಳಿಸಲು ಬಹಿರಂಗ ಚರ್ಚೆಗೆ ಸಿದ್ಧನಿದ್ದು.ಅದೇ ರೀತಿ ಕಡೂರು ಕ್ಷೇತ್ರಕ್ಕೆ ಸಂಸದ ಪ್ರಜ್ವಲ್ ರೇವಣ್ಣನವರೂ ಕೂಡ ನೀಡಿದ ಕೊಡುಗೆ ಏನೆಂದು ತಿಳಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಸಂಸದರಿಗೆ ಸವಾಲು ಹಾಕಿದರು. ಕಡೂರಿನಲ್ಲಿ ಸುರುಚಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ರಾಜ್ಯ ಕನಾಟಕದ 50 ವರ್ಷದ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಮಯದಲ್ಲಿ ಕಡೂರಿಗೆ ಬಂದ ಸಂಸದರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಿತ್ತು. ಆದರೆ ಆ ಪ್ರಬುದ್ಧತೆ ಅವರಲ್ಲಿ ಕಾಣಲಿಲ್ಲ. ಇದು ಕನ್ನಡ ನಾಡು,ನುಡಿ ಬಗ್ಗೆ ಅವರ ಕಾಳಜಿ ತೋರಿಸುತ್ತದೆ. ತಾಲೂಕಿಗೆ ಬರ ಆವರಿಸಿ ನಾಲ್ಕು ತಿಂಗಳಾದರೂ ವಿಚಾರ ತಿಳಿದಿರಲಿಲ್ಲವೆ? ಚುನಾವಣೆ ಹತ್ತಿರ ಬಂದಂತೆ ಬರ ಸಮೀಕ್ಷೆ ಮಾಡುವ ಪ್ರಹಸನ ನಿಲ್ಲಿಸಿ ಎಂದ ಅವರು ಮುಂದಿನ ಸಂಸತ್ ಅಧಿವೇಶನದಲ್ಲಿ ಹಾಸನ ಜಿಲ್ಲೆ, ಕಡೂರಿನ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆದು ಪರಿಹಾರ ಸಿಗುವಂತೆ ಮಾಡಲಿ ಎಂದರು. ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಬರ ಮತ್ತು ಬೆಳೆ ಹಾನಿ ಬಗ್ಗೆ ಕೇಂದ್ರಕ್ಕೆ ವರದಿ ನೀಡಿ ಪರಿಹಾರದ ಬೇಡಿಕೆ ನೀಡಿದೆ. ಪ್ರಜ್ವಲ್ ಅವರು ಹೆಚ್ಚುವರಿಯಾಗಿ ಪರಿಹಾರ ಕೊಡಿಸಲು ಮುಂದಾದರೆ ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಸಂಸದರಾದ ನಂತರ ಕ್ಷೇತ್ರಕ್ಕೆ ಒಮ್ಮೆಯೂ ಬಾರದೆ ಈಗ ದಿಢೀರೆಂದು ಕಡೂರಿಗೆ ಆಗಮಿಸುವ ಹಿನ್ನೆಲೆ ಜನತೆಗೆ ತಿಳಿದಿದೆ. ಮಾಜಿ ಪ್ರಧಾನಿ ಮೊಮ್ಮಗ ಎಂಬುದನ್ನು ಬಿಟ್ಟು ಬೇರೆ ಯಾವ ರಾಜಕೀಯ ಅರ್ಹತೆಗಳೂ ಪ್ರಜ್ವಲ್ ಅವರಿಗಿಲ್ಲ. ತಾವು 138 ಕೋಟಿ ರು. ಹಣ ಬಿಡುಗಡೆ ಮಾಡಿಸಿದ್ದು ಅದೇ ಹಣದಲ್ಲಿ ಈಗಲೂ ಕಾಮಗಾರಿ ನಡೆಯುತ್ತಿದೆ ಎಂಬ ಹೇಳಿಕೆ ಅವರತನವನ್ನು ತೋರಿಸುತ್ತದೆ ಎಂದರು. ರಾಗಿ ಅಥವಾ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಅಥವಾ ಇನ್ಯಾವುದಾದರೂ ನಿರ್ಧಾರ ತೆಗೆದು ಕೊಳ್ಳಲು ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ. ಯಾವುದೇ ನಿರ್ಧಾರವಾದರೂ ಅದು ರೈತರ ಪರವಾಗಿಯೇ ಇರುತ್ತದೆ ಎಂದರು. ಜಲಜೀವನ್ ಮಿಷನ್ ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದ ಕಾರ್ಯಕ್ರಮ. ರಾಜ್ಯದ ಎಲ್ಲ ಕ್ಷೇತ್ರ ಗಳಲ್ಲಿಯೂ ಈ ಯೋಜನೆ ಅನುಷ್ಠಾನವಾಗಲಿದೆ. ಕಡೂರಿನಲ್ಲಿ ಈ ಬಗ್ಗೆ ಮಾತನಾಡುವುದು ಸರಿಯೇ ಎಂದ ಅವರು, ಕಡೂರಿನ ಜನತೆ ಪ್ರಬುದ್ಧರಾಗಿದ್ದು, ಜನರ ನಡುವೆ ಇರುವವರನ್ನು ಸಂಸದರನ್ನಾಗಿ ಆರಿಸಲಿದ್ದಾರೆ. ನಾನು ಶಾಸಕನಾದ ನಂತರ ಏನೇನು ಅನುದಾನ ತಂದಿದ್ದೇನೆ ಎಂಬ ವಿವರ ಜನರ ಮುಂದಿಡುವೆ. ಅದರಂತೆ ಸಂಸದರಾದ ಪ್ರಜ್ವಲ್ ಅವರೂ ಸಹ ತಮ್ಮ ಸಂಸದರ ಅನುದಾನದಲ್ಲಿ ಕಡೂರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ವಿವರ ನೀಡಲಿ. ಚರ್ಚೆಗೆ ಬರುವುದಾದರೆ ನಾನು ಸಿದ್ಧ ನಿದ್ದೇನೆ. ಸ್ಥಳ ಮತ್ತು ದಿನಾಂಕವನ್ನು ಅವರೇ ನಿಗಧಿಪಡಿಸಿ ಆಹ್ವಾನಿಸಲಿ ಎಂದರು. ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಹರೀಶ್, ಲಿಂಗರಾಜು, ಸಪ್ತಕೋಟಿ ಧನಂಜಯ, ಸೋಲಾರ್ ಮನೋಹರ್,ಕಿರಣ್, ಕೆ.ಎಸ್. ವಿನಯ್ ಮತ್ತಿತರರು ಹಾಜರಿದ್ದರು. 2ಕೆಕೆಡಿಯು1ಕೆ.ಎಸ್. ಆನಂದ್.