ಮದ್ದೂರು ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸಾರ್ವಜನಿಕ ಚರ್ಚೆಗೆ ಸಿದ್ಧ

KannadaprabhaNewsNetwork |  
Published : Aug 27, 2026, 02:00 AM IST
26ಕೆಎಂಎನ್ ಡಿ19 | Kannada Prabha

ಸಾರಾಂಶ

ಮೂರು ತಿಂಗಳು, ಆರು ತಿಂಗಳಿಗೋ ಕ್ಷೇತ್ರಕ್ಕೆ ಬಂದು ಭಾಷಣ ಮಾಡಿ ಕಣ್ಣೀರು ಸುರಿಸಿ ಬಾಲಂಗೋಚಿಗಳಿಗೆ ಸಮಾಧಾನದ ಹೇಳಿಕೆ ನೀಡುವುದಲ್ಲ. ಜನರನ್ನು ಮರಳು ಮಾಡುವ ಜಾಯಮಾನ ನನ್ನದಲ್ಲ. ನನ್ನ ಅವಧಿಯ ಅಭಿವೃದ್ಧಿ ಕೆಲಸ ಮತ್ತು ಜೆಡಿಎಸ್ ಶಾಸಕರ ಅವಧಿಯ ಅಭಿವೃದ್ಧಿ ಕೆಲಸಗಳ ಅಂಕಿ-ಅಂಶಗಳ ಸಮೇತ ಸಾರ್ವಜನಿಕವಾಗಿ ಚರ್ಚೆ ನಡೆಸಲು ನಾನು ಸಿದ್ಧವಿದ್ದೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ಕ್ಷೇತ್ರದ ವಿಚಾರವಾಗಿ ನನ್ನ ಮೂರುವರೆ ವರ್ಷದ ಆಡಳಿತ ಹಾಗೂ ನಿಮ್ಮ ಪಕ್ಷದ ಮಾಜಿ ಸಚಿವರ ಕೆಲಸಗಳ ಬಗ್ಗೆ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಶಾಸಕ ಕೆ.ಎಂ.ಉದಯ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.ತಾಲೂಕಿನ ಹೆಮ್ಮನಹಳ್ಳಿ ಹಾಗೂ ನಗರದಲ್ಲಿ ಅಂದಾಜು 5 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಕ್ಷೇತ್ರದ ಮತದಾರರು ಶಾಸಕರಿಂದ ಸಾಕಷ್ಟು ರೋಸೋಗಿದ್ದಾರೆ ಎಂಬ ಕೇಂದ್ರ ಸಚಿವ ಹೇಳಿಕೆಗೆ ತಿರುಗೇಟು ನೀಡಿ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲು ರಾತ್ರಿ ಎನ್ನದೆ ಜನರ ಕಷ್ಟ ಸುಖಗಳಲ್ಲಿ ಭಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಮೂರು ತಿಂಗಳು, ಆರು ತಿಂಗಳಿಗೋ ಕ್ಷೇತ್ರಕ್ಕೆ ಬಂದು ಭಾಷಣ ಮಾಡಿ ಕಣ್ಣೀರು ಸುರಿಸಿ ಬಾಲಂಗೋಚಿಗಳಿಗೆ ಸಮಾಧಾನದ ಹೇಳಿಕೆ ನೀಡುವುದಲ್ಲ. ಜನರನ್ನು ಮರಳು ಮಾಡುವ ಜಾಯಮಾನ ನನ್ನದಲ್ಲ. ನನ್ನ ಅವಧಿಯ ಅಭಿವೃದ್ಧಿ ಕೆಲಸ ಮತ್ತು ಜೆಡಿಎಸ್ ಶಾಸಕರ ಅವಧಿಯ ಅಭಿವೃದ್ಧಿ ಕೆಲಸಗಳ ಅಂಕಿ-ಅಂಶಗಳ ಸಮೇತ ಸಾರ್ವಜನಿಕವಾಗಿ ಚರ್ಚೆ ನಡೆಸಲು ನಾನು ಸಿದ್ಧವಿದ್ದೇನೆ ಎಂದರು.

ಮಾಜಿ ಸಚಿವರ ಅವಧಿಯಲ್ಲಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಯಾವುದನ್ನು ಬಗೆಹರಿಸುವ ಕೆಲಸ ಮಾಡಿಲ್ಲ. ನಗರದಲ್ಲಿ ಹಾದು ಹೋಗಿರುವ ಕೆಮ್ಮಣ್ಣು ನಾಲೆಯನ್ನು 100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. 17 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ 4 ಕೋಟಿ ರು. ವೆಚ್ಚದಲ್ಲಿ ನಾಲೆಗೆ ಯಾವುದೇ ರೀತಿಯ ನೀರು ಸೇರದಂತೆ ಚರಂಡಿ ವ್ಯವಸ್ಥೆ ಮಾಡುವ ಮೂಲಕ ಈ ಭಾಗದ ಜನರ ಹಲವು ವರ್ಷಗಳ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದರು.

ನಾನೇನು ರಾಜಕೀಯ ಮಾಡಬೇಕೆಂದು ಇಲ್ಲಿಗೆ ಬಂದಿಲ್ಲ. ಸಾವಿರಾರು ಕೋಟಿ ಅನುದಾನ ತಂದು ಜನಸೇವೆ ಮಾಡುತ್ತಿದ್ದೇನೆ. ಕ್ಷೇತ್ರದ ಜನತೆಗೆ ಯಾವ ಕೆಲಸ ಆಗಿದೆ ಎಂಬುದು ಅವರ ಕಣ್ಣು ಮುಂದಿದೆ. ಕ್ಷೇತ್ರದ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೈಸೂರು ಭಾಗದ ಶಾಸಕರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕ್ಷೇತ್ರದಲ್ಲಿ ಉಳಿಕೆ ನೀರಾವರಿ ಯೋಜನೆಗಳಿಗೆ ಅನುದಾನ ಕೋರಲಾಗಿದೆ. ಸಿಎಂ ಅನುದಾನ ನೀಡುವ ಭರವಸೆ ನೀಡಿದ್ದು, ಮುಂದಿನ ನಿಗಮದ ಸಭೆಯಲ್ಲಿ ಅನುಮೋದನೆ ದೊರೆಯಲಿದೆ ಎಂದರು.

ಮದ್ದೂರು ನಗರಕ್ಕೆ 100 ಕೋಟಿ ವಿಶೇಷ ಅನುದಾನ ಹಾಗೂ ಪ್ರತಿ ಗ್ರಾಪಂಗೆ ಮೂಲ ಸೌಕರ್ಯ ಒದಗಿಸಲು ತಲಾ 2 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ 100 ಕೋಟಿ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದ ಪೇಟೆ ಬೀದಿ ಅಗಲೀಕರಣ ಕಾಮಗಾರಿ ಮುಂದಿನ ಒಂದು ವಾರದೊಳಗೆ ಸಿಹಿ ಸುದ್ದಿ ನೀಡಲಾಗುವುದು ಎಂದರು.

ಇದೇ ವೇಳೆ ಮನ್ಮುಲ್ ಅಧ್ಯಕ್ಷ ಎಂ.ಕೆ.ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಕದಲೂರು ರಾಮಕೃಷ್ಣ, ಸಿಪಾಯಿ ಶ್ರೀನಿವಾಸ್, ಚಂದ್ರಶೇಖರ್, ಜೈಶಂಕರ್, ನಂದೀಶ್, ಹೆಚ್.ಹೊಂಬಯ್ಯ, ಆದೀಶ್, ಆರೀಫ್, ಕಮಲ್ ನಾಥ್, ಸಿದ್ದರಾಜು, ಅಕ್ಮಲ್, ಮತ್ತಿತರರು ಇದ್ದರು.ನಿರುದ್ಯೋಗಿಗಳಾಗಿರುವ ಬಿಜೆಪಿ ನಾಯಕರಿಂದ ಪಾದಯಾತ್ರೆ: ಉದಯ್ ಲೇವಡಿ

ಮದ್ದೂರು:

ಬಿಜೆಪಿ ನಾಯಕರು ಈಗ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದು, ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಲೇವಡಿ ಮಾಡಿದರು.

ಸರ್ ಎಂ.ವಿಶ್ವೇಶ್ವರಯ್ಯ ನಗರ ಬಡಾವಣೆ ಕೆಮ್ಮಣ್ಣು ನಾಲೆ ಪರಿವೀಕ್ಷಣ ಪಥದಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿನ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ಬಿಜೆಪಿ ರಾಯಚೂರಿನಿಂದ ಬಳ್ಳಾರಿಯವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಈಗಾಗಲೇ ಸಚಿವ ಖಾತೆ ಹಂಚಿಕೊಳ್ಳಲು ಹೊರಟಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದಾಗಿ ರಾಜ್ಯದ ಚಿತ್ರಣವೇ ಬದಲಾಗಿದೆ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಈ ವೇಳೆ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಪುರಸಭೆ ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಎಂ.ಡಿ.ಮಹಾಲಿಂಗಯ್ಯ, ಎನ್‌.ಸಿ .ರಘು, ಶಾಂತಮ್ಮ, ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಕ್ಕೆ ಸದಸ್ಯರ ಬೆಂಬಲ ಅಗತ್ಯ: ಸಚಿವ ಚಲುವರಾಯಸ್ವಾಮಿ
ಕುಟುಂಬಗಳ ನಿರ್ವಹಣೆಗಾಗಿ ಮಹಿಳೆಯರಿಗೆ ಸಹಕಾರ ಸಂಘಗಳು ನೆರವು