ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು. ಆದರೆ, ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನೂ ಅನುಸರಿಸಲಿಲ್ಲ ಎಂದು ಆರೋಪಿಸಿದರು.
ಬೊಮ್ಮಾಯಿ ಅವರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದರೂ ಶೇ.56 ಮೀಸಲನ್ನು ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಿ, ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸಲು ಮುತುವರ್ಜಿ ವಹಿಸಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಹ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬರೀ ಮುಂದೂಡುವ ಕೆಲಸವಷ್ಟೇ ಆಯಿತು ಎಂದು ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.2022 ರ ಕಾಯ್ದೆಯನ್ನು ಭಾರತದ ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಲು ಮತ್ತು ಅನುಚ್ಛೇದ 15 ಮತ್ತು 16ಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ಅವರು ಹೇಳಿದರು. ಹಾಗೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗೆಲ್ಲ ಕೆಲ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದರು. ಇದರಿಂದ ಇಂದು ಸಾಕಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರೇ ಕಾರಣ ಎಂದು ಉಗ್ರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಯುವಹಳ್ಳಿ ರಮೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಲಾಯರ್ ನಾರಾಯಣಸ್ವಾಮಿ, ಮುಖಂಡರಾದ ಎಂ. ನರಸಿಂಹಯ್ಯ, ರಾಜಪ್ಪ, ಬಾಬಣ್ಣ, ಜಿ. ಹನುಮಂತರಾಯಪ್ಪ, ಮೂರ್ತಿ, ಗವಿರಾಯಪ್ಪ, ಎಸ್.ಎನ್. ಅಶ್ವತ್ಥನಾರಾಯಣ್, ನರೇಂದ್ರ, ವಕೀಲ ಮಠಮಪ್ಪ, ನರಸಿಂಹರಾಜು ಮತ್ತಿತರರು ಇದ್ದರು.
ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ವಿ.ಎಸ್. ಉಗ್ರಪ್ಪ ಮಾತನಾಡಿದರು