ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ನೂತನ ಕಚೇರಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಹಿರಿಯೂರು ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾನು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.ನಗರದ ಪ್ರಧಾನ ರಸ್ತೆಯಲ್ಲಿನ ಪಿಆರ್ ಇಡಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಗುತ್ತಿಗೆದಾರರ ಸಾಕಷ್ಟು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚಿಸಿದ್ದು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುಕೂಲ ಮಾಡಿಕೊಡುತ್ತೇನೆ ಹಾಗೂ ಎಲ್ಲರೂ ನನ್ನನ್ನು ನೆನೆಸುವಂತಹ ಮಹತ್ತರ ಕೊಡುಗೆ ಮಾರ್ಚ್ 4ರಂದು ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿ ದ್ದಾರೆ. ಅವರು ನುಡಿದಂತೆ ನಡೆಯುವ ಮುಖ್ಯಮಂತ್ರಿಯಾದ್ದರಿಂದ ಖಂಡಿತ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ.ಪ್ರಸ್ತುತ ಎಲ್ಲಾ ವರ್ಗದವರಿಗೂ ವಿಮೆ ಸೌಲಭ್ಯವಿದ್ದು, ಗುತ್ತಿಗೆದಾರರಿಗೆ ಇಲ್ಲಿಯವರೆಗೂ ಈ ಸೌಲಭ್ಯ ಸಿಕ್ಕಿಲ್ಲ. ಸುಮಾರು 600 ಕೋಟಿ ಹಣ ಇದ್ದರೂ ವಿಮಾ ಸೌಲಭ್ಯ ಸಿಕ್ಕಿಲ್ಲ. ಈ ಬಗ್ಗೆಯೂ ಸುಮಾರು ಒಂದೂವರೆ ವರ್ಷ ದಿಂದ ಹೋರಾಟ ನಡೆಸಿದ್ದೇವೆ. ಈ ಬೇಡಿಕೆ ಶೀಘ್ರವೇ ಈಡೇರಲಿದೆ. ಅಲ್ಲದೇ ಸ್ಥಳೀಯ ಗುತ್ತಿಗೆ ದಾರರಿಗೂ ಅನುಕೂಲ ಮಾಡಿಕೊಡಲಿದ್ದಾರೆ ಎಂದರು. ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿನ ಎಲ್ಲಾ ಇಲಾಖೆಗಳಿಂದ ಗುತ್ತಿಗೆದಾರರಿಗೆ 22 ಸಾವಿರ ಕೋಟಿ ಬಿಲ್ ಬರಬೇಕಿದೆ. ಬಜೆಟ್‌ಗೆ ಮೊದಲು ಶೇ.50 ರಷ್ಟು ಬಿಲ್ ಪಾವತಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಶೇ.40 ಲಂಚದ ಆರೋಪ ಮಾಡಿದ್ದಾಗ ಕೆಂಪಣ್ಣ ಹಾಗೂ ತಮಗೆ ಬೆದರಿಕೆ ಕರೆಗಳು ಬಂದಿದ್ದವು. ಜಗ್ಗದೆ ಹೋರಾಟ ಮುಂದುವರಿಸಿದ್ದೆವು. ಅನುದಾನ ಇಲ್ಲದೆ ಟೆಂಡರ್ ಕರೆಯುವ ಪರಿಪಾಠ ಎಲ್ಲಾ ಸರ್ಕಾರ ಗಳಲ್ಲಿದೆ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಚಂದ್ರಶೇಖರ್ ಮಾತನಾಡಿ, ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡುತ್ತ ಶೇ.25 ರಿಂದ 30ರಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದರೆ ಹಾಳಾಗುವುದು ನಾವೇ. ಕನಿಷ್ಟ ಜಿಲ್ಲೆಯಲ್ಲಿನ ಗುತ್ತಿಗೆದಾರರು ಸೌಹಾರ್ದದಿಂದ ಆಯಾ ತಾಲ್ಲೂಕಿನ ಕಾಮಗಾರಿಗಳನ್ನು ಅದೇ ತಾಲ್ಲೂಕಿನ ಗುತ್ತಿಗೆದಾರರು ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಸೂಚಿಸಿದರು.ಬೆಂಗಳೂರಿನಲ್ಲಿ ಸಿಎಂ ಸಚಿವ ಸಂಪುಟದ ಸಭೆ ಕರೆದಿದ್ದ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು ಒಂದು ಗಂಟೆ ಮುಂಚಿತವಾಗಿ ಬಂದು ನೂತನ ಕಚೇರಿ ಉದ್ಘಾಟಿಸಿ ವೇದಿಕೆಯಿಂದ ನಿರ್ಗಮಿಸಿದರು.ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಬಾಷಾ ಸಂಘದ ತಾಲೂಕು ಅಧ್ಯಕ್ಷ ಕೆ.ರಂಗಸ್ವಾಮಿ, ಕೆ.ಮಲ್ಲೇಶ್, ಎಚ್.ಆರ್. ನಿರಂಜನಮೂರ್ತಿ, ಎಸ್. ಖಾದರ್, ಎಸ್.ಜೆ. ಹನುಮಂತರಾಯ, ಟಿ. ಚಂದ್ರಶೇಖರ್, ಎಂ.ಎನ್.ಹೇಮಂತ ಕುಮಾರ್, ಡಿ. ನಾರಾಯಣರೆಡ್ಡಿ, ಎಂ.ಎಸ್.ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು,ಗಿಡ್ಡೋಬನಹಳ್ಳಿ ಅಶೋಕ್,ಲಕ್ಷ್ಮೀರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.