ಕೃಷ್ಣ ಎನ್. ಲಮಾಣಿ
ಬೆಂಗಳೂರಿನ ರಾಜ್ ಎಂಟರ್‌ಪ್ರೈಸಸ್‌ನ ಪರಿಣತ ಕಲಾವಿದರು ಹಾಗೂ ಕಾರ್ಮಿಕರು ವೇದಿಕೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹಂಪಿಯ ಗಾಯತ್ರಿ ಪೀಠದ ಬಳಿ ಪ್ರಧಾನ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಈ ವೇದಿಕೆಯಲ್ಲೇ ಫೆ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಹಾಗಾಗಿ ಈ ವೇದಿಕೆಯನ್ನು ಈ ಬಾರಿ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ.
ವಿಜಯನಗರ ವಾಸ್ತುಶಿಲ್ಪ: ಹಂಪಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ವಿರೂಪಾಕ್ಷೇಶ್ವರ ದೇವಾಲಯದ ಗೋಪುರ ಅರಳಲಿದೆ. ಭವ್ಯ ವೇದಿಕೆಯಲ್ಲಿ ಗೋಪುರ ಆಕರ್ಷಣೆ ಕೇಂದ್ರವಾಗಲಿದೆ. ಬಳಿಕ ಹಂಪಿಯ ಕಲ್ಲಿನತೇರು, ಕಡಲೆ ಕಾಳು ಗಣಪತಿ ಮತ್ತು ವಿಜಯನಗರ ವಾಸ್ತುಶಿಲ್ಪದ ಸ್ಮಾರಕಗಳನ್ನು ವೇದಿಕೆಯಲ್ಲಿ ಸೃಜಿಸಲಾಗುತ್ತದೆ. ಈ ವೇದಿಕೆಯಲ್ಲಿ ಎಲ್‌ಇಡಿ ಪರದೆಗಳು ಇರಲಿದ್ದು, ಲೈಟಿಂಗ್‌ನಲ್ಲಿ ವೇದಿಕೆ ಕಂಗೊಳಿಸಲಿದೆ. ಈ ವೇದಿಕೆ ಸೃಜನೆ ಕಾರ್ಯ ಇನ್ನೂ ಎರಡು ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ವೇದಿಕೆ ನಿರ್ಮಾಣದ ಹೊಣೆ ಹೊತ್ತಿರುವ ಬೆಂಗಳೂರಿನ ರಾಜ್ ಎಂಟರ್‌ಪ್ರೈಸಸ್‌ನ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ಈ ವೇದಿಕೆ 60 ಅಡಿ ಉದ್ದ ಹಾಗೂ 80 ಅಡಿ ಅಗಲ ಇರಲಿದೆ. ಇನ್ನೂ ಮುಂದೆಗಡೆ 120 ಅಡಿ ಅಗಲ ಇರಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಸೃಜಿಸಲಾಗುತ್ತಿದೆ. ಈ ವೇದಿಕೆ ಇಡೀ ಉತ್ಸವದ ಆಕರ್ಷಣೆ ಕೇಂದ್ರವಾಗಲಿದೆ.
ವೇದಿಕೆಯಲ್ಲಿ 15ರಿಂದ 20 ಸಾವಿರ ವಿವಿಐಪಿ, ವಿಐಪಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ 40 ಸಾವಿರ ಕುರ್ಚಿಗಳನ್ನು ಹಾಕಲಾಗುತ್ತಿದ್ದು, ಒಟ್ಟು 60 ಸಾವಿರ ಕುರ್ಚಿಗಳನ್ನು ಈ ವೇದಿಕೆ ಮುಂಭಾಗ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನುಳಿದ ಮೂರು ವೇದಿಕೆಗಳ ನಿರ್ಮಾಣವನ್ನು ರಾಜ್ ಎಂಟರ್ ಪ್ರೈಸಸ್ ಸಂಸ್ಥೆ ಮಾಡುತ್ತಿದೆ.
60 ಸಾವಿರ ಆಸನ: ಹಂಪಿ ಉತ್ಸವದ ಪ್ರಧಾನ ವೇದಿಕೆ ಆಕರ್ಷಕ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಹಿಂದೆ ಕೂಡ ಹಂಪಿ ಉತ್ಸದಲ್ಲಿ ವೇದಿಕೆ ನಿರ್ಮಾಣ ಮಾಡಿದ ಅನುಭವ ಇದೆ. ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಧಾನ ವೇದಿಕೆಯ ಮುಂಭಾಗ 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ ಎಂಟರ್‌ಪ್ರೈಸಸ್‌ನ ಮಂಜೇಶ್ ತಿಳಿಸಿದರು.