ಕನ್ನಡಪ್ರಭ ವಾರ್ತೆ ಕೊರಟಗೆರೆ
ಪತ್ರಿಕೆ ಹಂಚಿಕೆ ಮಾಡುವ ಹುಡುಗರು ಕಡ್ಡಾಯವಾಗಿ ಶಿಕ್ಷಣವಂತರಾಗಬೇಕು ಒಂದು ವೇಳೆ ತಮ್ಮಗಳ ವಿದ್ಯಾಭ್ಯಾಸಕ್ಕೆ ಬಡತನದಿಂದ ತೊಂದರೆಯಾಗಿದಲ್ಲಿ ನಮ್ಮ ಆಶ್ರಮ ಅಂತಹ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು ಎಂದು ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿ ತಿಳಿಸಿದರು. ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ತಾಲೂಕಿನ ೩೦ ಕ್ಕೂ ಹೆಚ್ಚು ಪತ್ರಿಕೆ ಹಂಚುವ ಹುಡುಗರಿಗೆ ಮತ್ತು ವಿತರಕರಿಗೆ ಜರ್ಕೀನ್ ಮತ್ತು ಉಲನ್ ಟೋಪಿಗಳನ್ನು ವಿತರಿಸಿ ಮಾತನಾಡಿದರು.ಪತ್ರಿಕೆ ಹಂಚುವ ಹುಡುಗರು ಬೆಳ್ಳಿಗೆ ಚಳಿ, ಗಾಳಿ, ಮಳೆ ಎನ್ನದೆ ಪತ್ರಿಕೆಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುತ್ತಾರೆ, ಅಂತಹ ಕಷ್ಟ ಪರಿಸ್ಥಿತಿಯಲ್ಲೂ ಪತ್ರಿಕೆ ತಲುಪಿಸುವ ಹುಡುಗರಿಗೆ ಥ್ಯಾಂಕ್ಸ್ ಹೇಳುವ ಮನಸ್ಥಿತಿ ಯಾವೊಬ್ಬ ಓದುಗರಿಗೂ ಇಲ್ಲ, ಪತ್ರಿಕೆ ಹಂಚುವ ಹುಡುಗರು ವಿದ್ಯಾಭ್ಯಾಸದಿಂದ ವಂಚಿತವಾದರೆ ಸಮಾಜ ತಲೆ ತಗ್ಗಿಸುವಂತ ಸಂಗತಿ, ಇಂತಹ ಬಡ ಹುಡುಗರ ವಿದ್ಯಾಭ್ಯಾಸ ಮುಂದುವರಿಕೆಗೆ ನಮ್ಮ ರಾಮಕೃಷ್ಣ ಸೇವಾ ಆಶ್ರಮ ಸದಾ ಸಹಾಯ ಹಸ್ತಕ್ಕೆ ಸಿದ್ದವಿರುತ್ತದೆ ಎಂದು ತಿಳಿಸಿದರು.ಪಾವಗಡದ ನಮ್ಮ ಕಣ್ಣಿನ ಆಸ್ಪತ್ರೆಯಲ್ಲಿ ಸಾವಿರಾರು ಬಡ ಜನತೆಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದೇವೆ, ಕೋವಿಡ್ ಸಮಯದಲ್ಲಿ ೬ ರಾಜ್ಯಗಳಲ್ಲಿ ಲಕ್ಷಾಂತರ ಬಡವರಿಗೆ ನೋಂದವರಿಗೆ ಆಹಾರ, ಬಟ್ಟೆಗಳು, ಔಷಧಿ ಮಾಸ್ಕ್‌ಗಳನ್ನು ವಿತರಿಸಿದ್ದೇವೆ, ಮೂಕ ಜೀವಿಗಳಾದ ರಾಸುಗಳ ರಕ್ಷಣೆಗೆ ಸಾವಿರಾರು ಟನ್‌ಗಳ ಮೇವುಗಳನ್ನು ರೈತರಿಗೆ ವಿತರಿಸಿದ್ದೇವೆ, ಪತ್ರಿಕೆ ಹಂಚುವ ಹುಡುಗರ ಬಗ್ಗೆ ಕೊರಟಗೆರೆ ತಾಲೂಕಿನ ಪತ್ರಕರ್ತರು ಹೋಂದಿರು ಪ್ರೀತಿ, ಅಭಿಮಾನ ಮತ್ತು ಅವರ ಕಷ್ಟಗಳ ಸ್ಪಂದನೆಯ ಮನಸ್ಸುಗಳನ್ನು ನೋಡಿ ಸಂತೋಷ ತಂದಿದೆ ಎಂದರು.ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಪತ್ರಿಕೆ ಹಂಚುವ ಹುಡುಗರು ಜೀವನದಲ್ಲಿ ಕಷ್ಟ ಪಟ್ಟು ದುಡಿದು ಹಣಗಳಿಸುವ ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದೀರಿ, ಬೆಳಿಗ್ಗೆ ಒಂದು ಗಂಟೆಗಳ ಕಾಲ ಪತ್ರಿಕೆ ಹಂಚಿದ ಬಳಿಕ ತಾವುಗಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.ಕೊರಟಗೆರೆ ಸಿಪಿಐ ಅನಿಲ್ ಮಾತನಾಡಿ ಸಮಾಜದಲ್ಲಿ ಅತ್ಯುನ್ನತ ಸ್ಥಾನಕ್ಕೆ ಹೋಗಿರುವ ಎ.ಪಿ.ಜೆ.ಅಬ್ದಲ್ ಕಲಾಂ, ಅಮೇರಿಕಾ ಮಾಜಿ ಅಧ್ಯಕ್ಷ ಜೋಬಿಡನ್ ಸೇರಿದಂತೆ ಹಲವು ಸಾಧಕರು ಬಾಲ್ಯದಲ್ಲಿ ಪತ್ರಿಕೆ ಹಂಚುತ್ತಿದ್ದವರಾಗಿದ್ದರು, ಅವರ ಸಾಧನೆಗೆ ಬಡತನ ಎಂದು ಅಡ್ಡ ಬರಲ್ಲಿಲ್ಲ ಅದೇ ರೀತಿ ಪತ್ರಿಕೆ ಹಂಚುವ ಹುಡುಗರು ಸಹ ಮುಂದೆ ಸಾಧಕರಾಗಬೇಕು ಎಂದು ತಿಳಿಸಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಕೊರಟಗೆರೆ ತಾಲೂಕಿನಲ್ಲಿ ಪತ್ರಕರ್ತರು, ಪತ್ರಿಕೆ ಹಂಚುವ ಹುಡುಗರು, ವಿತರಕರು ಒಂದೇ ಕುಟುಂಬದ ಸಹೋದರರು ಇದ್ದಂತೆ ಇದ್ದೇವೆ, ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ ನಮ್ಮ ಪತ್ರಿಕೆ ಹಂಚುವ ಹುಡುಗರಿಗೆ ರಾಮಕೃಷ್ಣ ಸೇವಾಶ್ರಮದಿಂದ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಂದ ಎರಡು ಬಾರಿ ಜರ್ಕೀನ್ ಅನ್ನು ನೀಡಲಾಗಿದೆ, ಮುಂದುವರೆದು ಜಪಾನಂದ ಶ್ರೀಗಳು ಜರ್ಕೀನ್ ಜೊತೆಯಲ್ಲಿ ಪತ್ರಿಕೆ ಹಂಚುವ ಹುಡುಗರಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಕರೋನಾ ಸಂದರ್ಭದಲ್ಲಿ ಪತ್ರಿಕೆ ಹಂಚುವ ಹುಡುಗರ ಕುಟುಂಬಗಳಿಗೆ ಆಹಾರ ಕಿಟ್ಟಗಳನ್ನು ವಿತರಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡ ಚಿಕ್ಕರಂಗಯ್ಯ, ಪತ್ರಕರ್ತ ಸಂಘದ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಚಿದಂಬರ, ಖಚಾಂಚಿ ಕೆ.ಬಿ.ಲೋಕೇಶ್, ಪದಾದಿಕಾರಿಗಳಾದ ಎನ್.ಪದ್ಮನಾಭ್, ಜಿ.ಎಮ್.ಶಿವಾನಂದ್, ರಾಘವೇಂದ್ರ, ರಮೇಶ್, ಮಂಜುನಾಥ್, ತಿಮ್ಮರಾಜು, ವಿಜಯಶಂಕರ್, ನರಸಿಂಹಮೂರ್ತಿ, ಸಿದ್ದರಾಜು, ಲಕ್ಷ್ಮೀಶ್, ದೇವರಾಜು, ನವೀನ್, ಸತೀಶ್, ಲಕ್ಷ್ಮೀಕಾಂತ, ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.