ಆಹ್ವಾನ ನೀಡಿದರೆ ಬಿಜೆಪಿ ಮರುಸೇರ್ಪಡೆಗೆ ಸಿದ್ಧ: ರಘುಪತಿ ಭಟ್

KannadaprabhaNewsNetwork |  
Published : Oct 02, 2024, 01:05 AM IST
ರಘುಪತಿ ಭಟ್ | Kannada Prabha

ಸಾರಾಂಶ

ಪಕ್ಷದಿಂದ ಉಚ್ಚಾಟನೆ ಆಗಿದ್ದು, ಮರಳಿ ಕರೆದರೆ ಖಂಡಿತವಾಗಿಯೂ ಹೋಗುವೆ ಮಾಜಿ ಶಾಸಕ ರಘುಪತಿ ಭಟ್ ಇಂಗಿತ ವ್ಯಕ್ಪಡಿಸಿದರು.

ಹುಬ್ಬಳ್ಳಿ: ನನಗೆ ಬಿಜೆಪಿಗೆ ಮರಳುವಂತೆ ಆಹ್ವಾನ ನೀಡಿದರೆ ಸೇರ್ಪಡೆಗೆ ಸಿದ್ಧ ಎಂದು ಮಾಜಿ ಶಾಸಕ ರಘುಪತಿ ಭಟ್ ಇಂಗಿತ ವ್ಯಕ್ಪಡಿಸಿದರು.

ನಗರದಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಗೆ ಸೇರ್ಪಡೆ ಚಿಂತನೆ ನಡೆದಿದ್ದು, ನನ್ನ ಕರೆದರೂ ಹೋಗುವೆ. ನನಗೆ ಯಾವುದೇ ಸಮಸ್ಯೆ ಇಲ್ಲ. ಖಂಡಿತವಾಗಿಯೂ ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಚುನಾವಣೆಯಲ್ಲಿ ಸೋಲಲಿ, ಬಿಡಲಿ. ಬಿಜೆಪಿ ಕಾರ್ಯಕರ್ತನಾಗಿ ಇರುವೆ. ಈ ಮಾತನ್ನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಎಂದರು.

ಬಿಜೆಪಿಯಲ್ಲಿ ಅತೃಪ್ತ ನಾಯಕರ ಸಭೆ, ಗಂಗಾಜಲದಿಂದ ಬಿಜೆಪಿ ಶುದ್ಧೀಕರಣ ಮಾಡಬೇಕು ಎಂಬ ವಿಚಾರಕ್ಕೆ ಉತ್ತರಿಸಿದ ಭಟ್‌, ಈ ವಿಚಾರವಾಗಿ ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ. ನಾನು ಚುನಾವಣೆಗೆ ಸ್ಪರ್ಧಿಸುವಾಗ ಬಿಜೆಪಿ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೆ. ಆದರೆ, ನಾನು ರಾಷ್ಟ್ರೀಯ ವಿಚಾರ ಇರಿಸಿಕೊಂಡು ರಾಜಕಾರಣ ಮಾಡಿದವನು. ಪಕ್ಷದಿಂದ ಉಚ್ಚಾಟನೆ ಆಗಿದ್ದು, ಮರಳಿ ಕರೆದರೆ ಖಂಡಿತವಾಗಿಯೂ ಹೋಗುವೆ. ಕೆಲವು ದಿನಗಳಿಂದ ನಾನು ರಾಜಕಾರಣಕ್ಕೆ ವಿರಾಮ ಹೇಳಿ ಧಾರ್ಮಿಕ ಕಾರ್ಯಕ್ರಮ ಮಾಡಿಕೊಂಡು ನೆಮ್ಮದಿಯಿಂದ ಇದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಯಾರೇ ಆಗಲಿ ಅವರ ಮೇಲೆ ಎಫ್‌ಐಆರ್ ಆದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂಥದು ರಾಜಕಾರಣದಲ್ಲಿ ಇದೊಂದು ಸ್ವಾಭಾವಿಕ ಪ್ರಕ್ರಿಯೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದರು.

ಈ ಹಿಂದೆ ಬಿಜೆಪಿ ಹಿರಿಯ ನಾಯಕರಾಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಅವರು ಹವಾಲಾ ಹಗರಣದ ಡೈರಿಯಲ್ಲಿ ಹೆಸರು ಬಂದಾಗ ರಾಜೀನಾಮೆ ನೀಡಿದ್ದರು. ನಂತರ ಕ್ಲೀನ್ ಚಿಟ್ ಪಡೆದು ಮತ್ತೇ ಒಳಗೆ ಬಂದರು. ಅದೇ ರೀತಿಯಾಗಿ ಸಿದ್ದರಾಮಯ್ಯ ಕಪ್ಪುಚುಕ್ಕೆ ಇಲ್ಲದವರು ಎಂದು ಹೇಳಿಕೊಂಡು ಬಂದವರು. ಈಗ ಅವರ ಮೇಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ