ಕೊಪ್ಪಳ:
ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಭೆ ನಡೆಸಿದ ಅವರು, ಹೋರಾಟಗಾರರಿಗೆ ಸ್ಪಷ್ಟ ಸಂದೇಶ ನೀಡಿ, ಎಂತಹ ಬೆಲೆ ತೆತ್ತಾದರೂ ಸರಿ ಕಾರ್ಖಾನೆ ಬರಲು ಬಿಡುವುದಿಲ್ಲ. ನಾನು ಸೇರಿದಂತೆ ಜನಪ್ರತಿನಿಧಿಗಳು ಹೋರಾಟದ ಪರವಾಗಿ ಇದ್ದು, ಶಾಸಕರು ಸೇರಿದಂತೆ ಎಲ್ಲರ ಬೆಂಬಲ ಪಡೆದು ಅಗತ್ಯಬಿದ್ದರೆ ಇನ್ನೊಂದು ಬೃಹತ್ ಹೋರಾಟ ಮಾಡೋಣ. ಅದಕ್ಕೂ ಮೊದಲ ಕೈಗಾರಿಕೆ ಸಚಿವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ ಎಂದರು.
ಬಲ್ಡೋಟಾ ಕಾರ್ಖಾನೆ ಕೊಪ್ಪಳ ಬಳಿ ಪ್ರಾರಂಭವಾದರೆ ಇಲ್ಲಿ ಯಾರೂ ಇರಲು ಸಾಧ್ಯವೇ ಇಲ್ಲ. ಆಗ ನಾವು, ನಮ್ಮ ಮಕ್ಕಳು ಸೇರಿದಂತೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಹೀಗಾಗಿ, ಇದರ ವಿರುದ್ಧ ನಾನು ಎಂಥ ಹೋರಾಟಕ್ಕೂ ಸಿದ್ಧ ಎಂದ ಅವರು, ಈ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರವೇ ಸ್ಥಳೀಯರ ಅಭಿಪ್ರಾಯ ಪಡೆದ ನಂತರವೇ ಅನುಮತಿ ನೀಡಬೇಕೋ ಬೇಡವೋ ಎಂದು ನಿರ್ಧರಿಸಲಾಗುವುದು ಎಂದು ಹೇಳಿದೆ, ಈ ವರೆಗೂ ಕೈಗಾರಿಕಾ ಸಚಿವರು ಕೊಪ್ಪಳಕ್ಕೆ ಬಂದಿಲ್ಲ. ಇದರ ಅರ್ಥ ಅವರು ಪರವಾನಗಿ ರದ್ದು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮತ್ತು ವಕೀಲರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ, ಅವರಿಗೆ ನ್ಯಾಯ ಸಿಗುತ್ತದೆ, ನಾವು ಇಲ್ಲಿ ನೆಮ್ಮದಿಯ ಜೀವನ ನಡೆಸಬೇಕಿದೆ. ಉಳಿದ ಹಲವು ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಆಯುಷ್ಯವೇ ಕಮ್ಮಿ ಆಗಿದ್ದು ಹಲವು ರೋಗಗಳು ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹಲವು ಮುಖಂಡರು, ಕಾರ್ಖಾನೆಗಳು ಅನೇಕ ನಿಯಮ ಮೀರಿ ಲಕ್ಷಾಂತರ ಜನರಿಗೆ ಸಮಸ್ಯೆ ತಂದೊಡ್ಡಿವೆ. ಕಾರ್ಖಾನೆಯಿಂದ ಆಗಿರುವ ಪರಿಸರ ನಾಶ, ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ, ಆರೋಗ್ಯ ಸಮಸ್ಯೆ ಪರಿಗಣಿಸಿ ಸರ್ಕಾರ ಕಾರ್ಖಾನೆ ವಿಸ್ತರಣೆ ಅನುಮತಿ ಹಿಂಪಡೆಯಬೇಕೆಂದು ಮನವಿ ಮಾಡಿದರು.
ಈ ಕುರಿತು ಚರ್ಚಿಸಲು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ ಜೂ.23ರಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಜೂ.24ರಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.