ಹೊಸಪೇಟೆ: ಮಂತ್ರಾಲಯ ಮಠ ಎಂದಿಗೂ ಯಾವ ಮಠದ ವಿರುದ್ಧವೂ ನ್ಯಾಯಾಲಯಗಳಲ್ಲಿ ತಾನಾಗಿಯೇ ದಾವೆ ಹೂಡಿಲ್ಲ. ಪರ ಮಠ ದಾವೆ ಹೂಡಿದಾಗ ನ್ಯಾಯಾಲಯಗಳಲ್ಲಿ ವಾದಿಸಲಾಗಿದೆ. ನವ ಬೃಂದಾವನ, ನರಹರಿತೀರ್ಥರ ಬೃಂದಾವನ ಸೇರಿದಂತೆ ಉಳಿದ ತೀರ್ಥರ ವಿವಾದಗಳನ್ನು ಉಭಯ ಮಠಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಂತ್ರಾಲಯ ಮಠ ಸದಾ ಸಿದ್ಧವಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ನವ ಬೃಂದಾವನ, ನರಹರಿತೀರ್ಥರ ಬೃಂದಾವನ ಸೇರಿದಂತೆ ಉಳಿದ ತೀರ್ಥರ ವಿವಾದಗಳನ್ನು ಉಭಯ ಮಠಗಳು ಒಂದೆಡೆ ಸೇರಿ ಸೌಹಾರ್ದವಾಗಿ ಪೂಜೆ ಸಲ್ಲಿಸೋಣ. ಆದರೆ ಪರ ಮಠದವರು ಸೌಹಾರ್ದವಾಗಿ ಪೂಜೆ ಸಲ್ಲಿಸಲು ಬರುತ್ತಿಲ್ಲ. ನರಹರಿತೀರ್ಥರ ಆರಾಧನೆಗೆ ಆಹ್ವಾನಿಸಿದರೂ ಆಗಮಿಸಿಲ್ಲ. ಪರ ಮಠದವರು ಒಪ್ಪುತ್ತಿಲ್ಲ. ಪೂಜೆ, ಆರಾಧನೆಗೆ ನಿರ್ಬಂಧ ಇಲ್ಲ. ಈ ರೀತಿ ವಿವಾದದಿಂದ ಭಕ್ತರು, ಮಠದ ಶಿಷ್ಯರು, ಸಮಾಜದಲ್ಲಿ ಗೊಂದಲ, ಬೇಸರ ಮೂಡುತ್ತದೆ ಎಂದರು.
ನರಹರಿತೀರ್ಥರ ಬೃಂದಾವನದಲ್ಲಿ ಕಳೆದ 26 ವರ್ಷಗಳಿಂದ ನಾವು ಪೂಜೆ ಸಲ್ಲಿಸಿರಲಿಲ್ಲ. ನ್ಯಾಯಾಲಯದಲ್ಲಿ ತೀರ್ಪು ಬಂದ ಬಳಿಕ ಪೂಜೆ ಸಲ್ಲಿಸುತ್ತಿದ್ದೇವೆ. ನಮಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ತೆರವಾಗಿದೆ ಎಂದರು.ಮಂತ್ರಾಲಯ ಶ್ರೀಗಳಿಂದ ಪೂಜೆ: ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಹಿನ್ನೆಲೆ ಹಂಪಿ ನರಹರಿತೀರ್ಥರ ಸನ್ನಿಧಿಯಲ್ಲಿ ಬುಧವಾರ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಿಂದ ಉತ್ತರಾರಾಧಾನೆ ನೆರವೇರಿಸಲಾಯಿತು. ಸುಬುಧೇಂದ್ರ ತೀರ್ಥರು ಬೃಂದಾವನ ಸನ್ನಿಧಿಯಲ್ಲಿ ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.ಶ್ರೀಮಠದ ಪದ್ಧತಿಯಂತೆ ಬೆಳಿಗ್ಗೆ ಪಂಚಾಮೃತಾಭಿಷೇಕ, ಅರ್ಚನೆ, ರಜತ ರೇಷ್ಮೆ, ಹೂವಿನ ಅಲಂಕಾರ ನೆರವೇರಿಸಲಾಯಿತು.
ಮಂತ್ರಾಲಯ ಮಠದಿಂದ ಹಂಪಿಯಲ್ಲಿ ನಡೆಯುತ್ತಿರುವ ನರಹರಿತೀರ್ಥರ ಆರಾಧನಾ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಮೂವರು ವಿದ್ಯಾರ್ಥಿಗಳು, ಚಾಲಕ ತುಫಾನ್ ಕಾರಿನ ಟೈರ್ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಇದು ಶ್ರೀಮಠಕ್ಕೆ ತುಂಬಲಾರದ ನಷ್ಟವಾಗಿದೆ. ಹಾಗಾಗಿ ವೈಭವೋಪೇತ ಆರಾಧನೆ ನೆರವೇರಿಸದೇ ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಚಿಕ್ಕಮಕ್ಕಳು ಮಠಕ್ಕೆ ಆಸ್ತಿ ಇದ್ದಂತೆ. ಅವರ ಕುಟುಂಬದ ಜೊತೆ ಶ್ರೀಮಠ ಸದಾ ಇರಲಿದೆ. ಹೋದ ಜೀವಕ್ಕೆ ಬೆಲೆ ಕಟ್ಟಲಾಗದು. ಆದರೂ ಅವರ ಕುಟುಂಬಕ್ಕೆ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ರೀತಿಯಿಂದಲೂ ಜೊತೆಗಿರುತ್ತೇವೆ ಎಂದು ಗದ್ಗದಿತರಾದರು.