ಕಾಂಗ್ರೆಸ್ ಸರ್ಕಾರದಿಂದ ಅಧಿಕಾರ ಕಿತ್ತಾಟವೆಂಬ ರಿಯಾಲಿಟಿ ಶೋ: ರಾಜುಗೌಡ

KannadaprabhaNewsNetwork |  
Published : Nov 26, 2025, 02:15 AM IST
ರಾಜುಗೌಡ  | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಿತ್ತಾಟವೆಂಬ ‘ರಿಯಾಲಿಟಿ ಶೋ’ ನಡೆಸುತ್ತಾ ಜನರನ್ನು ರಂಜಿಸುತ್ತಿದ್ದು ಅನ್ನದಾತರನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಮಾಜಿ ಸಚಿವ ರಾಜು ಗೌಡ ಲೇವಡಿ ಮಾಡಿದರು.

ಬಳ್ಳಾರಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಿತ್ತಾಟವೆಂಬ ‘ರಿಯಾಲಿಟಿ ಶೋ’ ನಡೆಸುತ್ತಾ ಜನರನ್ನು ರಂಜಿಸುತ್ತಿದ್ದು ಅನ್ನದಾತರನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಮಾಜಿ ಸಚಿವ ರಾಜು ಗೌಡ ಲೇವಡಿ ಮಾಡಿದರು.

ನಗದರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ಕಿತ್ತಾಟದಲ್ಲಿ ನಾಡಿನ ಹಿತ ಕಾಯುವ ಯಾವುದೇ ಕಾರ್ಯಕ್ರಮ ಸರ್ಕಾರ ಮಾಡುತ್ತಿಲ್ಲ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಅದರಲ್ಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ದೂರಿದರು.

ರಾಜ್ಯದಲ್ಲಿ ವಿಪರೀತ ಮಳೆಯಿಂದಾಗಿ ವ್ಯಾಪಕ ಬೆಳೆ ಹಾನಿಯಾಗಿದೆ. ಬೆಳೆ ಪರಿಹಾರಕ್ಕೆ ಅರ್ಜಿಯನ್ನೇ ಹಾಕಬೇಡಿ ಎಂದು ಹಲವು ತಾಲೂಕುಗಳಲ್ಲಿ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಿತ್ತು. ಇಂದು ರಾಜ್ಯ ಸರ್ಕಾರ 4 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ಬಜೆಟ್‌ ಮಂಡಿಸಿದ್ದರೂ, ಸಕಾಲಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.

ಬೆಳಗಾವಿಯಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟ ನಮಗೆ ಮಾದರಿಯಾಗಬೇಕು. ಅಲ್ಲಿನ ರೈತರ ಕಬ್ಬಿಗೆ ನಿಗದಿ ಮಾಡಲಾದ ಬೆಲೆಯನ್ನು ರಾಜ್ಯದ ಉಳಿದ ರೈತರಿಗೂ ನಿಗದಿ ಮಾಡಬೇಕು. ತುಂಗಭದ್ರಾ ಕೊಳ್ಳದ ಎರಡನೇ ಬೆಳೆಗೆ ನೀರು ಪೂರೈಕೆ ಮಾಡಬೇಕು. ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಪ್ರತಿಭಟನೆಗಳನ್ನು ನಡೆಸಲು ತೀರ್ಮಾನಿಸಿದೆ. ನ. 26ರಂದು ತುಂಗಭದ್ರಾ ಜಲಾಶಯದ ಬಳಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಇದೇ ವಿಚಾರಗಳನ್ನು ಎತ್ತಿಕೊಂಡು ಇದೇ ನ. 28ರಂದು ಬಳ್ಳಾರಿ ನಗರದಲ್ಲೂ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಾಲ್ಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್‌ ಕುಮಾರ್‌ ಮೋಕ ತಿಳಿಸಿದರು.

ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಪಕ್ಷದ ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಎಚ್. ಹನುಮಂತಪ್ಪ, ಡಾ. ಮಹಿಪಾಲ, ಗಣಪಾಲ ಐನಾಥ ರೆಡ್ಡಿ ಮತ್ತಿತರರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ