ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ
ದೇಶ ಮೊದಲು ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ರಾಷ್ಟ್ರೀಯ ಹಿತಾಸಕ್ತಿ ಬೆಳೆಸಿಕೊಂಡು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸ್ವಾತಂತ್ರ್ಯದ ನಿಜ ಅರ್ಥ ಸಾಕಾರಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ೮೦ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೆ ವೈಯಕ್ತಿಕ ಸುಖ, ಸಂತೋಷ ಹಾಗೂ ನೆಮ್ಮದಿ ತ್ಯಾಗ ಮಾಡಿ ಹೋರಾಡಿದ ಸಾವಿರಾರು ದೇಶಭಕ್ತರು ಮತ್ತು ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.೧೮೮೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಬಳಿಕ ಸ್ವಾತಂತ್ರ್ಯ ಚಳವಳಿಗೆ ಭದ್ರ ವೇದಿಕೆ ದೊರೆಯಿತು. ಮಹಾತ್ಮ ಗಾಂಧೀಜಿ ಆಗಮನದೊಂದಿಗೆ ಹೋರಾಟ ಜನಸಾಮಾನ್ಯರ ಚಳವಳಿಯಾಗಿ ರೂಪುಗೊಂಡಿತು. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಹಾಗೂ ಕ್ವಿಟ್ ಇಂಡಿಯಾ ಚಳವಳಿ ದೇಶಾದ್ಯಂತ ನಡೆದವು. ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ ಮತ್ತು ಹೋರಾಟದ ಫಲವಾಗಿ ಸ್ವತಂತ್ರ ರಾಷ್ಟ್ರವಾಯಿತು ಎಂದರು.ಇದೇ ವೇಳೆ ಜಿಲ್ಲೆಯ ಹೊಸಕೊಪ್ಪ ಕೃಷ್ಣರಾಯರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಹಲವು ರೀತಿಯಲ್ಲಿ ಸಂಘಟಿಸಿ ಬಲಪಡಿಸಿದ್ದರು. ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟ, ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಚರಕದಿಂದ ನೂಲು ತೆಗೆಯುವುದು, ಖಾದಿ ಬಳಕೆ ಹಾಗೂ ಕಾನೂನು ಭಂಗ ಚಳವಳಿ ಸೇರಿದಂತೆ ಹಲವು ಹೋರಾಟಗಳು ಜಿಲ್ಲೆಯಲ್ಲಿ ನಡೆದಿವೆ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಪೆರೇಡ್‌ನ ಬಹುಮಾನ ವಿತರಣೆ
ಇನ್ನೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸವಿಲ್ ಪೊಲೀಸ್ ಪಡೆ, ಗೃಹ ರಕ್ಷಕದಳ, ಅರಣ್ಯ ಇಲಾಖೆ ಹಾಗೂ ನಿವೃತ್ತ ಸೈನಿಕರ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಲಾ ವೈಭವಶಾಲಾ ಮಕ್ಕಳಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ 500ಕ್ಕೂ ಅಧಿಕ ಮಕ್ಕಳು ಜಿಲ್ಲಾ ಆಟದ ಮೈದಾನದಲ್ಲಿ ಏಕಕಾಲದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರ ತೊಟ್ಟು, ತ್ರಿವರ್ಣ ಧ್ವಜ ಹಿಡಿದು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು.