ಕೊಪ್ಪಳ: ಪಂಚಮಸಾಲಿ ಸಮಾಜದ ಹೋರಾಟಕ್ಕೆ ನ್ಯಾಯ ನೀಡಬೇಕಾದ ಸರ್ಕಾರ ಪ್ರತಿಭಟನಾ ನಿರತರ ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು. ನಾವು ಹಲ್ಲೆಯಾದವರ ಮನೆ, ಮನೆಗೆ ಹೋಗಿ, ಧೈರ್ಯ ತುಂಬುತ್ತೇವೆ. ಈ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಾವು ಇಷ್ಟಕ್ಕೆ ಸುಮ್ಮನೇ ಬಿಡುವುದಿಲ್ಲ. ಈ ಸರ್ಕಾರದಿಂದ ನಾವು ಮೀಸಲಾತಿ ನಿರೀಕ್ಷೆ ಮಾಡುವುದಿಲ್ಲ. ಆದರೆ, ನಮಗೆ ಯಾವ ಸರ್ಕಾರ ಮೀಸಲಾತಿ ಕೊಡುತ್ತದೆಯೋ ಅವರನ್ನು ನಾವು ಬೆಂಬಲಿಸುವ ಕುರಿತು ಹಳ್ಳಿ, ಹಳ್ಳಿ ಸುತ್ತಿ ಜಾಗೃತಿ ಮೂಡಿಸುತ್ತೇವೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಮತ್ತು ಕೇಂದ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಓಬಿಸಿ ಸೌಲಭ್ಯ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಕನಿಷ್ಠ ಈಗಾಗಲೇ ನೀಡಿರುವ 2ಡಿ ಯನ್ನಾದರೂ ಕಾರ್ಯಗತ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.ನಾನು ಉತ್ತರಿಸಲ್ಲ:
ನಾನು ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ, ಅದಕ್ಕಾಗಿ ಹೋರಾಟ ಮಾಡುತ್ತಾರೆ ಎಂದರು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದರೇ ಬಿಜೆಪಿಯವರು ಎನ್ನುತ್ತಾರೆ. ಇದಕ್ಕೆಲ್ಲ ಉತ್ತರ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ನಾನು ಖಂಡಿಸುತ್ತೇನೆ:
ನನಗೆ ಇರುವ ಮಾಹಿತಿಯ ಪ್ರಕಾರ ವಿಪ ಸದಸ್ಯ ಸಿ.ಟಿ. ರವಿ ಅವರು ಕೆಟ್ಟ ಪದ ಬಳಕೆ ಮಾಡಿದ್ದಾರೆ ಎಂದು. ಹೀಗಾಗಿ, ನಾನು ಅದನ್ನು ಖಂಡಿಸುತ್ತೇನೆ. ಭಾರತದಲ್ಲಿ ಯಾವುದೇ ಮಹಿಳೆಗೆ ಅಪಮಾನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.