ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪೆರಾಜೆ ಜ್ಯೋತಿ ವಿದ್ಯಾ ಸಂಘ ಸಂಯುಕ್ತ ಆಶ್ರಯದಲ್ಲಿ ಪೆರಾಜೆಯ ಜ್ಯೋತಿ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ದಿ. ಗಂಗಾಧರ ಶೇಟ್ ಮತ್ತು ಸುಲೋಚನಾ ಬಾಯಿ ಸ್ಮಾರಕ ದತ್ತಿ ಕಾರ್ಯಕ್ರಮದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಸಿಪಾಯಿ ದಂಗೆ ಭಾರತದ ಮೊದಲ ಸ್ವಾತಂತ್ರ ಹೋರಾಟ ಎಂದು ಇತಿಹಾಸ ನಿರ್ಮಿಸಲಾಗಿದೆ. ಆದರೆ ಅದಕ್ಕೂ 20 ವರ್ಷಗಳ ಹಿಂದೆ ಬ್ರಿಟೀಷರನ್ನು ನಮ್ಮ ನೆಲದಿಂದ ಓಡಿಸುವ ಪ್ರಯತ್ನ ನಡೆದಿದೆ. ಕೊಡಗಿನ ರಾಜ ಚಿಕ್ಕವೀರ ರಾಜೇಂದ್ರ ಅವರನ್ನು ಬ್ರಿಟಿಷರು ರಾಜಪಟ್ಟದಿಂದ ಇಳಿಸಿದ ನಂತರ ಬ್ರಿಟಿಷ್ ಆಳ್ವಿಕೆ ಈ ಪ್ರದೇಶದಲ್ಲಿ ಪ್ರಾರಂಭವಾಯಿತು. ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆ ಕಾರಣ ಜನರು ಬ್ರಿಟಿಷರ ವಿರುದ್ಧ ದಂಗೆ ಏಳುವ ಪ್ರಯತ್ನ ನಡೆಯಿತು. ಆ ಸಂದರ್ಭ ರಾಜಮನೆತನದ ಪ್ರತಿನಿಧಿ ಹೇಳಿಕೊಂಡು ಸ್ವಾಮಿ ಅಪರಾಂಪರ ಎನ್ನುವ ವ್ಯಕ್ತಿ ಇವರೆಲ್ಲರೂ ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ತಮ್ಮ ಧ್ವಜವನ್ನು ಏರಿಸಿ, 13 ದಿನಗಳ ಕಾಲ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಗಿಡುತ್ತಾರೆ ನಂತರ ಬ್ರಿಟಿಷರು ಬಹು ದೊಡ್ಡ ಸೈನ್ಯದೊಂದಿಗೆ ಬಂದು ಇವರನ್ನು ನಿಯಂತ್ರಣಕ್ಕೆ ತರುತ್ತಾರೆ ಎಂದು ಕೊಡಗಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಮೆಲುಕು ಹಾಕಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, 200 ವರ್ಷಗಳಿಗೂ ಹೆಚ್ಚು ನಮ್ಮನ್ನು ಆಳಿದ ಬ್ರಿಟಿಷರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿ ಸ್ವಾತಂತ್ರವನ್ನು ಗಳಿಸಿಕೊಂಡಿತು. ನಮ್ಮ ಕೊಡಗು ಜಿಲ್ಲೆ ಏನು ಆ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆದರೆ ಮಾಹಿತಿಯ ಕೊರತೆಯಿಂದಾಗಿ ನಮ್ಮ ಜಿಲ್ಲೆಯಲ್ಲಿ ನಡೆದಂತಹ ಸ್ವಾತಂತ್ರ್ಯದ ಹೋರಾಟಗಳು ಜನರನ್ನು ತಲುಪಲಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದಂತಹ ವಸ್ತು ಅಲ್ಲ ಅದರ ಹಿಂದೆ ಇರುವಂತಹ ತ್ಯಾಗ ಬಲಿದಾನ ಹೋರಾಟಗಳು ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎನ್ನುವ ದೃಷ್ಟಿಯಿಂದ ಗೋಣಿಕೊಪ್ಪಲಿನ ಎಂ.ಜಿ ಮೋಹನ್ ಅವರು ಅವರ ತಂದೆ ತಾಯಿಗಳ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ ಎಂದರು.
ದತ್ತಿದಾನಿಗಳಾದ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲರಿ ಮಾಲೀಕರಾದ ಎಂ.ಜಿ ಮೋಹನ್ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲ ಪೆರಾಜೆ ಅವರು ಮಾತನಾಡುತ್ತಾ ಈ ಕಾರ್ಯಕ್ರಮಕ್ಕಾಗಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.
ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಹೋಬಳಿ ಕಾರ್ಯದರ್ಶಿ ಸಂಗೀತಾ ರವಿರಾಜ್ ಅವರು ಸ್ವಾಗತಿಸಿ ನಿರೂಪಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೆ ರ ತುಳಸಿ ಮೋಹನ್ ಅವರು ವಂದಿಸಿದರು.