ಜೆಡಿಎಸ್‌ಗೆ ನಮ್ಮಿಂದ ಪುನರ್ಜನ್ಮ; ಚನ್ನಪಟ್ಟಣ ಬಿಟ್ಟು ಕೊಡಲಿ - ಬಸನಗೌಡ ಪಾಟೀಲ ಯತ್ನಾಳ

KannadaprabhaNewsNetwork | Updated : Oct 20 2024, 10:10 AM IST

ಸಾರಾಂಶ

ಎಚ್‌.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಅಗತ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನಮಗೆ ಬೆಂಬಲ ನೀಡಿದ ಕಾರಣಕ್ಕೆ ಅನುಕೂಲ ಆಗಿದೆ. ಅದರಂತೆ ಜೆಡಿಎಸ್‌ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ.

ಹುಬ್ಬಳ್ಳಿ: ಜೆಡಿಎಸ್‌ ಪಕ್ಷಕ್ಕೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಅವರಿಂದ ನಮಗೂ ಲಾಭವಾಗಿದೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ತ್ಯಾಗ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ನಗರದಲ್ಲಿ ಸಿ.ಪಿ. ಯೋಗೇಶ್ವರಗೆ ಚನ್ನಪಟ್ಟಣ ಟಿಕೆಟ್‌ ವಿಷಯದ ಬಗ್ಗೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಅಗತ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನಮಗೆ ಬೆಂಬಲ ನೀಡಿದ ಕಾರಣಕ್ಕೆ ಅನುಕೂಲ ಆಗಿದೆ. ಅದರಂತೆ ಜೆಡಿಎಸ್‌ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಇದರಿಂದಾಗಿ ಎರಡು ಕಡೆಯವರಿಗೂ ಲಾಭವಾಗಿದೆ ಎಂದ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಟಿಕೆಟ್‌ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಆದ್ದರಿಂದ ಸಚಿವ ಕುಮಾರಸ್ವಾಮಿ ಅವರು ಟಿಕೆಟ್‌ ತ್ಯಾಗ ಮಾಡಬೇಕು ಎಂದರು.

ಶಿಗ್ಗಾವಿ ಟಿಕೆಟ್‌ ಬೊಮ್ಮಾಯಿ ಅವರ ಪುತ್ರನಿಗೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭರತ್‌ ಬೊಮ್ಮಾಯಿಗೆ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನೇಕೆ ಬಲಿಪಶು ಮಾಡುತ್ತೀರಿ. ರಾಜ್ಯದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿರುವವರಿಂದಲೇ ಕುಟುಂಬ ರಾಜಕಾರಣ ಮುಂದುವರಿದಿದೆ. ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್‌ ನೀಡಿದರೆ ತಪ್ಪೇನಿಲ್ಲ. ಈ ಹಿಂದೆ ಎಲ್ಲರಿಗೂ ಟಿಕೆಟ್‌ ಕೊಟ್ಟ ಮೇಲೆ ಅವರು ಮಗನಿಗೆ ಕೊಟ್ಟರೆ ತಪ್ಪೇನಿಲ್ಲ. ನಮ್ಮ ಪಕ್ಷದ ಹಿರಿಯರು ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ನಿರ್ಣಯ ಮಾಡತ್ತಾರೆ ಎಂದರು.

ಸಿಎಂ ರಾಜೀನಾಮೆ ನೀಡಲಿ:

ಒಂದು ಕಪ್ಪು ಚುಕ್ಕೆ ಇಲ್ಲದಿರುವ ಸಿಎಂ ಎಂದಿದ್ದ ಸಿದ್ದರಾಮಯ್ಯ, ಮತ್ತೆ ಈಗ ಮುಡಾ ಹಗರಣದಲ್ಲಿ ಏಕೆ ಸಿಲುಕಿಕೊಂಡಿದ್ದಾರೆ? ಮುಡಾ ಸೈಟ್‌ನ್ನು ಆವಾಗಲೇ ಕೊಟ್ಟಿದ್ದರೆ ಮುಗಿದು ಬಿಡುತ್ತಿತ್ತು. ಈಗ ಹಗರಣದಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಆರೋಪ ಮುಕ್ತರಾಗಬೇಕು ಎಂದು ಯತ್ನಾಳ ಆಗ್ರಹಿಸಿದರು.

ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್‌ ವಾಪಸ್‌ ಪಡೆದಿರುವುದು ದುರಂತದ ಸಂಗತಿ. ದೇಶದ್ರೋಹಿಗಳು ಪೊಲೀಸ್‌ ಠಾಣೆ ಸುಡಲು ಮುಂದಾಗಿದ್ದರು. ದೇಶದಲ್ಲಿ ಯಾವುದೇ ಪಕ್ಷ ಇದ್ದರೂ ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಇದರಿಂದಾಗಿ ಪೊಲೀಸರ ನೈತಿಕತೆ ಅಡಗಿ ಹೋಗುತ್ತದೆ ಎಂದರು.

ಕೆಜೆ ಹಳ್ಳಿ, ಡಿಜೆ ಹಳ್ಳಿ ನಂತರ ಹುಬ್ಬಳ್ಳಿ ಗಲಭೆ ಬಹಳ ಗಂಭೀರವಾದದ್ದು, ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಈ ಪ್ರಕರಣವನ್ನು ಹಿಂಪಡೆಯಬಾರದು. ಹಾಗೇನಾದರೂ ಮಾಡಿದರೆ ಹೈಕೋರ್ಚ್‌ ಮೆಟ್ಟಿಲು ಹತ್ತುತ್ತೇವೆ. ದೇಶದ್ರೋಹಿಗಳನ್ನು ಗುಂಡು ಹಾರಿಸಿ ಕೊಲ್ಲಬೇಕು. ಮುಸ್ಲಿಂರ ತುಷ್ಟೀಕರಣಕ್ಕೆ ಕಾಂಗ್ರೆಸ್‌ ಮುಂದಾಗಿದೆ ಎಂದು ಯತ್ನಾಳ ಆರೋಪಿಸಿದರು.

ಜೋಶಿಗೆ ಸಂಬಂಧವಿಲ್ಲ

ಪ್ರಹ್ಲಾದ್ ಜೋಶಿ‌ ಸಹೋದರನ ಮೇಲೆ ವಂಚನೆ ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ನೀಡಿದ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಪ್ರಹ್ಲಾದ ಜೋಶಿ ಹಾಗೂ ಅವರ ಸಹೋದರ ಬೇರೆ ಬೇರೆಯಾಗಿದ್ದಾರೆ. ಜೋಶಿ ಹಾಗೂ ಸಹೋದರ ಗೋಪಾಲ ಜೋಶಿಗೂ ಯಾವುದೇ ಬಗೆಯ ಸಂಬಂಧವಿಲ್ಲ ಎಂದು ತಿಳಿಸಿದರು. ಸುಮ್ಮನೆ ಪ್ರಹ್ಲಾದ ಜೋಶಿ ಅವರ ಹೆಸರು ಕರೆತಲಾಗುತ್ತಿದೆ. ಎಲ್ಲೆಡೆ ಒಳ್ಳೆಯವರು ಇರುವಂತೆ ಕೆಟ್ಟವರು ಇರುತ್ತಾರೆ ಎಂದರು.

Share this article