ಸೋಮರಡ್ಡಿ ಅಳವಂಡಿ ಕೊಪ್ಪಳ
ಪಾಳು ಬಿದ್ದ ಭೂಮಿಗೂ ಇಲ್ಲಿ ಬೆಳೆ ವಿಮಾ ಪರಿಹಾರ ಪಡೆದಿದ್ದಾರೆ. ಈರುಳ್ಳಿ ಬೆಳೆ ಬಿತ್ತದೆಯೇ ಪಹಣಿಯಲ್ಲಿ ತಪ್ಪಾಗಿ ನಮೂದಿಸಿ ಲಕ್ಷ ಲಕ್ಷ ಬೆಳೆ ವಿಮಾ ಪರಿಹಾರ ಪಡೆಯುವ ಮೂಲಕ ಖದೀಮರು ಲೂಟಿ ಮಾಡುತ್ತಿದ್ದಾರೆ.ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯಲ್ಲಿ ರಂಗಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ಪಾಳು ಬಿದ್ದ ಭೂಮಿ ಗುರುತಿಸಿರುವ ಖದೀಮರು, ರೈತರಿಗೆ ಗೊತ್ತಿಲ್ಲದಂತೆ ಬೆಳೆ ವಿಮೆ ಪಾವತಿ ಮಾಡಿ ಪರಿಹಾರ ಪಡೆದಿದ್ದಾರೆ.
ಅಚ್ಚರಿ ಎಂದರೆ ಒಂದೇ ಅರ್ಜಿಯಲ್ಲಿ ನೂರಾರು ಎಕರೆ ಭೂಮಿಗೆ ಬೆಳೆ ವಿಮೆ ಪಾವತಿ ಮಾಡಿ ಅದೇ ಖಾತೆಯ ಮೂಲಕ ಪರಿಹಾರ ಪಡೆದುಕೊಂಡಿದ್ದಾರೆ.ನೀರಾವರಿಯೇ ಇಲ್ಲದ ಹನುಮನಾಳ ಹೋಬಳಿಯಲ್ಲಿ ನೀರಾವರಿ ಎಂದು ನಮೂದಿಸಿಯೂ ಲೂಟಿ ಮಾಡಲಾಗಿದೆ. ಹನುಮನಾಳ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಈ ರೀತಿಯ ಸಾಲು ಸಾಲು ಅವಾಂತರಗಳು ಆಗಿದ್ದು, ಕನ್ನಡಪ್ರಭಕ್ಕೆ ಈ ಎಲ್ಲ ದಾಖಲೆಗಳು ಲಭ್ಯವಾಗಿವೆ. 1682986 ಅರ್ಜಿ ಸಂಖ್ಯೆಯೊಂದರಿಂದಲೇ ಸಾಕಷ್ಟು ಭೂಮಿಯ ಬೆಳೆ ವಿಮೆ ಪರಿಹಾರ ಪಡೆದುಕೊಂಡಿರುವುದು ಅನುಮಾನ ಮೂಡಿಸಿದೆ. ಅಷ್ಟೇ ಅಲ್ಲ ಕೃಷಿ ಇಲಾಖೆಯ ಎಫ್ ಐಡಿ ಸಂಖ್ಯೆಯ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಭಾರಿ ಗೋಲ್ ಮಾಲ್ : ಬೆಳೆ ವಿಮೆ ಪರಿಹಾರ ಪಡೆಯಲು ಭಾರಿ ಗೋಲ್ ಮಾಲ್ ಮಾಡಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನೀರಾವರಿ ಇಲ್ಲದೆ ಇರುವ ಊರಿನಲ್ಲಿಯೂ ನೀರಾವರಿ ಎಂದು ನಮೂದಿಸಿ, ಈರುಳ್ಳಿ ಬೆಳೆಯದೇ ಈರುಳ್ಳಿ ಬೆಳೆದ ದಾಖಲೆ ಸೃಷ್ಟಿಸಿ ಬೆಳೆ ವಿಮೆ ಪರಿಹಾರ ಪಡೆದಿರುವುದು ಅಲ್ಲದೆ ರೈತರಿಗೆ ಗೊತ್ತಿಲ್ಲದಂತೆಯೇ ಯಾರದೋ ಖಾತೆಗೆ ಹಣ ಸೆಳೆಯಲಾಗಿದೆ.ಅಧಿಕಾರಿಗಳು ಶಾಮೀಲು: ಕೇವಲ ಖದಿಮರು ಈ ರೀತಿ ಮಾಡಲು ಸಾಧ್ಯವೇ ಇಲ್ಲ. ಇದರಲ್ಲಿ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಅನೇಕರು ಶಾಮೀಲಾಗಿದ್ದಾರೆ. ಇವರೆಲ್ಲರೂ ಸೇರಿಕೊಂಡು ಕೂಟ ರಚಿಸಿಕೊಂಡೇ ಅಕ್ರಮ ಎಸಗಿದ್ದಾರೆ.
ಸಮಗ್ರ ತನಿಖೆ ಅಗತ್ಯ:ಕೊಪ್ಪಳ ಜಿಲ್ಲೆಯಲ್ಲಿ ಕೇವಲ ಹನುಮನಾಳ ಹೋಬಳಿ ಅಷ್ಟೇ ಅಲ್ಲ, ಅನೇಕ ಹೋಬಳಿಗಳಲ್ಲಿಯೂ ಈ ಅಕ್ರಮ ನಡೆದಿದ್ದು, ಸಮಗ್ರ ತನಿಖೆಯಿಂದಲೇ ಬೆಳಕಿಗೆ ಬರಬೇಕಾಗಿದೆ.ಬೆರಗಾದ ರೈತರು:ತಮ್ಮೂರಲ್ಲಿ ನೀರಾವರಿ ಇಲ್ಲದಿದ್ದರೂ ಸಹ ನೀರಾವರಿ ಎಂದು ನಮೂದಿಸಿದ್ದು, ಅಲ್ಲದೆ ಪಾಳು ಬಿದ್ದ ಭೂಮಿಯ ಹೆಸರಿನ ಪಹಣಿಯ ಮೂಲಕ ಗೋಲ್‌ಮಾಲ್ ಮಾಡಿರುವುದನ್ನು ಕಂಡು ರೈತರು ಬೆರಗಾಗಿದ್ದಾರೆ.
ಮೆಕ್ಕೆಜೋಳ ಬೆಳೆದಿರುವ ಭೂಮಿಯಲ್ಲಿ ಈರುಳ್ಳಿ ಬೆಳೆ ಬೆಳೆದ ನಕಲಿ ದಾಖಲೆ ಸೃಷ್ಟಿಸಿ ಬೆಳೆ ವಿಮಾ ಪರಿಹಾರ ಪಡೆದಿರುವ ಪ್ರಕರಣ ಕನ್ನಡಪ್ರಭ ಬೆಳಕಿಗೆ ತಂದ ಬೆನ್ನಲ್ಲೇ ಈಗ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿರುವುದು ಅಚ್ಚರಿಯಾಗಿದೆ.