ಮತ್ತೆ 4 ತಿಂಗಳು ಹಳೆ ಬಸ್‌ ನಿಲ್ದಾಣ ಬಂದ್‌

KannadaprabhaNewsNetwork |  
Published : Apr 10, 2025, 01:03 AM IST
9ಎಚ್‌ಯುಬಿ21, 22, 23ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಬುಧವಾರ ವೀಕ್ಷಿಸಿದರು. | Kannada Prabha

ಸಾರಾಂಶ

ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ ನಿಲ್ದಾಣ, ಚೆನ್ನಮ್ಮ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳನ್ನು 4 ತಿಂಗಳು ಕಾಲ ತಾತ್ಕಾಲಿಕವಾಗಿ ಬಂದ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಹುಬ್ಬಳ್ಳಿ: ನಗರದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ. 50ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ. ಸಾರಿಗೆ ಬಸ್‌ ನಿಲ್ದಾಣ, ಚೆನ್ನಮ್ಮ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳನ್ನು 4 ತಿಂಗಳು ಕಾಲ ತಾತ್ಕಾಲಿಕವಾಗಿ ಬಂದ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಅವರು ನಗರದ ಚೆನ್ನಮ್ಮ ವೃತ್ತ, ಹಳೇ ಕೋರ್ಟ್ ವೃತ್ತ, ಇಂದಿರಾ ಗಾಜಿನ ಮನೆ ವೃತ್ತದಲ್ಲಿ ಪ್ರಗತಿಯಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬುಧ‍ವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಗರದಲ್ಲಿ 2022 ರಿಂದ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ವಿಜಯಪುರ ರಸ್ತೆಯ ಕಡೆಯಿಂದ (710ಮೀ), ಗದಗ ರಸ್ತೆಯಿಂದ (700 ಮೀ), ಚೆನ್ನಮ್ಮ ವೃತ್ತದಿಂದ ಹೊಸೂರ ವೃತ್ತದ ವರೆಗೆ (850 ಮೀ), ಗೋಕುಲ ರಸ್ತೆಯಲ್ಲಿ ಏರ್‌ಪೋರ್ಟ್ ಕಡೆಗೆ (689 ಮೀ), ಧಾರವಾಡ ರಸ್ತೆ ಕಡೆಗೆ (310 ಮೀ) ಹಾಗೂ 350 ಮೀ. ಅಪರ‍್ಯಾಂಪ್ ಸೇರಿ ಒಟ್ಟು 3.600 ಕಿ.ಮೀ ಮೇಲ್ಸೆತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಏ. 20ರಿಂದ ಆ. 19ರ ವರೆಗೆ ಸುಮಾರು 4 ತಿಂಗಳ ಕಾಲ ಚೆನ್ನಮ್ಮ ವೃತ್ತದಿಂದ ಬಸವವನದ ವರೆಗೆ (500 ಮೀ), ವಿಜಯಪುರ ರಸ್ತೆಯಲ್ಲಿ ಚೆನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ವರೆಗೆ (150 ಮೀ) ಹಾಗೂ ಚೆನ್ನಮ್ಮ ವೃತ್ತದಲ್ಲಿ ಆಯ್ದ ಭಾಗಗಳಲ್ಲಿ ಪಿಲ್ಲರ್ ಕಾಮಗಾರಿಗಳಿಗೆ ಬ್ಯಾರಿಕೇಡಿಂಗ್ ಮಾಡಲು ಚೆನ್ನಮ್ಮ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು.

ಚೆನ್ನಮ್ಮ ವೃತ್ತದಿಂದ ಬಸವವನದ ವರೆಗೆ ಹಾಗೂ ವಿಜಯಪುರ ರಸ್ತೆಯಲ್ಲಿ 80 ಗಿರ್ಡರ್ ಹಾಗೂ 16 ಸ್ಪಾನಗಳ ಸ್ಲಾಬ್‌‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ರೋಟರಿ ಕಾಮಗಾರಿಗಾಗಿ ಪೋರ್ಟಲ್‌ ಕ್ಯಾಪ್ ಹಾಗೂ 8 ಪಿಯರ್‌‌ಗಳ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದರು.

ಹು-ಧಾ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ಡಿಸಿಪಿ ರವೀಶ ಸಿ.ಆರ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಟಿ. ಪ್ರದೀಪ ಸೇರಿದಂತೆ ಹಲವರಿದ್ದರು.4 ತಿಂಗಳು ಸಾರಿಗೆ ಬಸ್‌ ನಿಲ್ದಾಣ ಬಂದ್‌

ಫ್ಲೈ ಓವರ್‌ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿನ ಉಪನಗರ ಸಾರಿಗೆ ನಿಲ್ದಾಣ (ಹಳೇ ಬಸ್‌ ನಿಲ್ದಾಣ)ವನ್ನು 4 ತಿಂಗಳ ಕಾಲ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಐಟಿ ಪಾರ್ಕ್ ಹತ್ತಿರದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ಸ್ಥಾಪಿಸಲಾಗುವುದು. ಅಲ್ಲದೇ ಉಪನಗರ ಬಸ್ ನಿಲ್ದಾಣವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ನಿರ್ವಹಣೆ ಹಾಗೂ ರಕ್ಷಣೆ ಮಾಡಬೇಕು. ವಿಜಯಪುರ ಮತ್ತು ಗದಗ ಹಾಗೂ ಉಳಿದ ಪ್ರದೇಶದಿಂದ ಬರುವ ಬಸ್‌ಗಳಿಗೆ ಕಾರವಾರ ರಸ್ತೆ, ಸಿಬಿಟಿ ಹಾಗೂ ಹೊಸೂರ ಬಸ್‌ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು. ಸಂಚಾರ ಮಾರ್ಗಗಳ ಬದಲಾವಣೆ

ಧಾರವಾಡದಿಂದ ವಿಜಯಪುರ, ಗದಗಿಗೆ: ಹೊಸೂರ ವೃತ್ತದಿಂದ ಕಾಟನ ಮಾರ್ಕೆಟ್, ಶಾರದಾ ಹೋಟೆಲ್, ದೇಸಾಯಿ ವೃತ್ತದ ಮೂಲಕ ಪಿಂಟೋ ವೃತ್ತ ಅಥವಾ ಕೋರ್ಟ್ ವೃತ್ತದ ಮೂಲಕ ಗದಗ ಹಾಗೂ ವಿಜಯಪುರಕ್ಕೆ ಸಂಚರಿಸಬಹುದಾಗಿದೆ ಅಥವಾ ಹೊಸೂರ ವೃತ್ತದಿಂದ ಕಾಟನ್‌ ಮಾರ್ಕೆಟ್, ನೀಲಿಜಿನ ರಸ್ತೆ, ಚೆನ್ನಮ್ಮ ವೃತ್ತ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಮೂಲಕವೂ ಗದಗ ಹಾಗೂ ಸಿಬಿಟಿಗೆ ಸಂಚರಿಸಬಹುದಾಗಿದೆ.

ವಿಜಯಪುರದಿಂದ ಧಾರವಾಡಕ್ಕೆ: ಸರ್ವೋದಯ ವೃತ್ತದಿಂದ ಡಿ.ಆರ್.ಎಂ ಆಫೀಸ್, ಸ್ಟೇಶನ್ ರಸ್ತೆ, ಚೆನ್ನಮ್ಮ ವೃತ್ತ, ಕಾರವಾರ ರಸ್ತೆ ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದಾಗಿದೆ.

ಗದಗದಿಂದ ಧಾರವಾಡಕ್ಕೆ: ಸ್ಟೇಶನ ರಸ್ತೆ, ಚೆನ್ನಮ್ಮ ವೃತ್ತ, ಕಾರವಾರ ರಸ್ತೆ, ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದಾಗಿದೆ.

ನೀಲಿಜಿನ ರಸ್ತೆ: ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೀಲಿಜಿನ ರಸ್ತೆಯನ್ನು ಕೇವಲ ವಾಯುವ್ಯ ಸಾರಿಗೆ ಸಂಚಾರಕ್ಕೆ ತೆರೆಯಲಾಗುವುದು. ಲಘು ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಉಪನಗರ ಸಾರಿಗೆ ವಾಹನಗಳ ಕಾರ್ಯಚರಣೆ ಮಾಡಲು ಪ್ರಸ್ತಾಪಿತ ಮಾರ್ಗ:

ಹೊಸೂರ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಸಾಂಸ್ಕೃತಿಕ ಭವನ ಮುಂಚಿನ ಬಲ ತಿರುವು, ಉತ್ತರ ಸಂಚಾರ ಪೊಲೀಸ್ ಠಾಣೆ ಪಕ್ಕದ ಬಲ ತಿರುವು, ಅಟೋ ಹೌಸ್ (ಸ್ವಿಮ್ಮಿಂಗ್ ಪೂಲ್) ಬಳಿ ಬಲ ತಿರುವು ಪಡೆದು, ಗ್ಲಾಸ್ ಹೌಸ್ ಕಾಂಪೌಂಡ್ ಪಕ್ಕದಲ್ಲಿರುವ ಬಸ್ ನಿಲುಗಡೆ ಮುಖಾಂತರ ಮರಳಿ ಹೊಸೂರು ಸರ್ಕಲ್ ತೆರಳುವುದು. ಈ ಸಂಪೂರ್ಣ ರಸ್ತೆಯನ್ನು ಉಪನಗರ ಸಾರಿಗೆ ನಿಲುಗಡೆ ಮತ್ತು ಕಾರ್ಯಾಚರಣೆ ಮಾಡಲಿದೆ. ಕಮರಿಪೇಟ ಪೊಲೀಸ್ ಠಾಣೆಯಿಂದ ಚೆನ್ನಮ್ಮ ಸರ್ಕಲ್‌ಗೆ ಬರುವ ವಾಹನಗಳನ್ನು ನಿರ್ಬಂಧಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?