ಮಂಗಳೂರು: ಸಾಧಕರನ್ನು ಗುರುತಿಸಿ, ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರಾಮಕ್ಷತ್ರಿಯ ಸೇವಾ ಸಂಘದ ವಾರ್ಷಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಗರದ ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ಭಾನುವಾರ ನಾಲ್ವರು ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ರಾಮ ಕ್ಷತ್ರಿಯ ಸೇವಾ ಸಂಘವು ಕಳೆದ 75 ವರ್ಷಗಳಿಂದ ನಿರಂತರವಾಗಿ ಆಯೋಜಿಸಿದ ಸಮಾಜ ಸೇವಾ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಮಾಜದ ಸಂಘಟನೆ ಮತ್ತು ಒಗ್ಗಟ್ಟು ಈ ಸಂಸ್ಥೆಯ ಉದ್ದೇಶ. ಸಂಸ್ಥೆಯು ಇನ್ನಷ್ಟು ಜನಪರ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಾಧಕರಿಗೆ ಭಗವಂತನು ಇನ್ನಷ್ಟು ಸ್ಫೂರ್ತಿ ನೀಡಿ, ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು. ಪ್ರತಿಯೊಬ್ಬರೂ ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಹೊಂದಿದ್ದು, ಈ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ಕರೆ ನೀಡಿದರು.ಸಾಧಕರಿಗೆ ಸನ್ಮಾನ: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ.ಎಚ್. ಪ್ರಭಾಕರ್, ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ಸದಾನಂದ ಪೂಜಾರಿ, ಮಂಗಳೂರು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಅಂತಾರಾಷ್ಟ್ರೀಯ ಭಾರ ಎತ್ತುವ ಕ್ರೀಡಾಪಟು ನಾಗಶ್ರೀ ಗಣೇಶ್ ಶೇರುಗಾರ್ ಅವರನ್ನು ಆಯಾ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ, ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಧಕರು, ತಮ್ಮ ಸಾಧನೆಯ ಹಾದಿಯನ್ನು ಸ್ಮರಿಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಅಭಿನಂದನಾ ಭಾಷಣ ಮಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಕನಸುಗಾರ, ಛಲಗಾರ ಮತ್ತು ಯಶಸ್ಸು ಸಾಧಿಸುವ ಸರದಾರ. ರಾಮ ಕ್ಷತ್ರಿಯ ಸಮಾಜ ಸಣ್ಣ ಸಮುದಾಯವಾದರೂ ಸಮಾಜಕ್ಕೆ ತನ್ನದೇ ಆದ ಸಾಧನೆಯ ಮೂಲಕ ಶಕ್ತಿಯನ್ನು ಪ್ರದರ್ಶಿಸಿದೆ ಎಂದರು.
ಡಾ. ಶಿವಾನಂದ ಬೇಕಲ್ ಅವರು ರಚಿಸಿದ ‘ಒಗಟಿನ ಮನೆ’ ಕೃತಿ ಲೋಕಾರ್ಪಣೆಗೊಳಿಸಲಾಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಕಾಶ್ ಇದ್ದರು.ಸಂಸ್ಥೆಯ ಅಧ್ಯಕ್ಷ ಮುರಳೀಧರ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ರಾವ್ ವಂದಿಸಿದರು. ಯೋಗೀಶ್ ಕುಮಾರ್ ಜೆಪ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ರೋಟರಿ ಮಂಗಳೂರು ಸಿಟಿ ಮತ್ತು ರೋಟರಿ ಮಂಗಳೂರು ಮತ್ತಿತರ ಸಂಸ್ಥೆಗಳ ಸದಸ್ಯರು ಸನ್ಮಾನಿತರನ್ನು ಅಭಿನಂದಿಸಿದರು.