ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಹಿರಿಯರ ಸೇವೆಯನ್ನು ಗುರುತಿಸಿ ಅಭಿನಂದಿಸುವುದೇ ನಮಗೆ ದೊಡ್ಡ ಗೌರವದ ಪ್ರಶಸ್ತಿಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ನಿಂಗೇಗೌಡ ಅಭಿಪ್ರಾಯಪಟ್ಟರು.ತಾಲೂಕಿನ ಮತ್ತೀಕೆರೆ- ಶೆಟ್ಟಿಹಳ್ಳಿ ಗ್ರಾಮದ ಸಾರ್ವಜನಿಕ ಪ್ರೌಢಶಾಲೆಯಲ್ಲಿ ೧೯೮೦ರಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಗುರು- ಶಿಷ್ಯರ ಸಮಾಗಮ ಹಾಗೂ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಾವು ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬುದು ಪ್ರತಿಯೊಬ್ಬ ಶಿಕ್ಷಕರ ಆಸೆಯಾಗಿತ್ತು. ಆದರೆ ನಮ್ಮ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿ ನಿವೃತ್ತಿಯಾದರೂ ತಮಗೆ ಪಾಠ ಮಾಡಿದ ಗುರುಗಳನ್ನು ನೆನೆದು ಗೌರವ ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡುವುದು ನಮ್ಮ ವೃತ್ತಿ ಜೀವನಕ್ಕೆ ಮರೆಯಲಾಗದ ಶ್ರೇಷ್ಠ ಗೌರವ ಆಗಿದೆ ಎಂದು ಬಣ್ಣಿಸಿದರು.ಗುರುವಂದನೆ ಸ್ವೀಕರಿಸಿದ ಮತ್ತೋರ್ವ ಗುರು ಕೆ.ಆರ್. ಕೇಶವಮೂರ್ತಿ ಮಾತನಾಡಿ, ಶಿಕ್ಷಕರು ಸೇವಾ ಮನೋಭಾವದಿಂದ ವಿದ್ಯಾರ್ಥಿಗಳ ಜೀವನ ರೂಪಿಸಲು ಶಿಸ್ತಿನ ಮಾರ್ಗ ಹಿಡಿಯುತ್ತಾರೆ. ಆದರೆ ಪ್ರಸಕ್ತ ಸಮಾಜದಲ್ಲಿ ಗುರುಗಳಿಗೆ ವಿದ್ಯಾರ್ಥಿಗಳು ಗೌರವ ನೀಡುವುದು ಸಹ ಕಡಿಮೆ ಆಗಿದೆ. ಇಂತಹ ಸಂದರ್ಭದಲ್ಲಿ ೪೫ ವರ್ಷಗಳ ಹಿಂದೆ ಶಿಕ್ಷಣ ನೀಡಿದ ನಮ್ಮ ಶ್ರಮಕ್ಕೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿ ನಾವು ಇಂತಹವರ ಶಿಷ್ಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಿದ್ಯಾರ್ಥಿಗಳನ್ನು ಪಡೆದಿರುವ ನಾವೇ ಧನ್ಯರು ಎಂದು ಬಣ್ಣಿಸಿದರು.
ಗುರುವಂದನೆ ಸಲ್ಲಿಸಿ ಬಳಿಕ ಬಿ.ಆರ್. ಹರಿದಾಸ್ ಮಾತನಾಡಿ, ವೃತ್ತಿಯಲ್ಲೇ ಶ್ರೇಷ್ಠವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿಯಾಗಿದೆ. ಈ ವೃತ್ತಿಯ ಮೂಲಕ ಸಮಾಜದ ಎಲ್ಲಾ ರಂಗಗಳಿಗೂ ಸಮರ್ಥರನ್ನು ಕಳಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಿದ್ದಾರೆ. ಇಂದು ನಾವೆಲ್ಲಾ ಸಮಾಜದಲ್ಲಿ ಒಂದು ಸ್ಥಾನ ಅಲಂಕರಿಸಿ ನಿವೃತ್ತಿಯಾಗಿದ್ದೇವೆ ಎಂದರೆ ಅದಕ್ಕೆ ಗುರುಗಳು ನಮಗೆ ನೀಡಿದ ಮಾರ್ಗದರ್ಶನವೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಗುರುಗಳನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಸಮಾರಂಭದಲ್ಲಿ ಗುರುಗಳಾದ ಎಸ್.ವಿ. ಸತ್ಯಸಂದಾಚಾರ್ (ಎಸ್‌ವಿಎಸ್), ಎಂ. ರಂಗರಾವ್ (ಎಂಆರ್‌ಆರ್), ಸಿ. ರಾಮಕೃಷ್ಣಯ್ಯ(ಸಿಆರ್), ಜವರಾಯಿಗೌಡ(ಜೆಜಿ) ಪಿ. ಪುಟ್ಟಸ್ವಾಮಿ(ಪಿಪಿಎಸ್) ಕೇಶವಮೂರ್ತಿ, ಶಿವಲಿಂಗಯ್ಯ, ಎಚ್.ಎಂ. ರಾಮಯ್ಯ, ಕೆ.ಪಿ. ಜಯಮುದ್ದು, ಎಂ.ಕೆ. ಜಯರಾಜು ಅವರಿಗೆ ಗುರುವಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಸಾರ್ವಜನಿಕ ಪ್ರೌಢಶಾಲೆಯಲ್ಲಿ ೨೦೨೪- ೨೦೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದ ರಿಷಿ ಬಿನ್ ನಾಗೇಶ್, ಯೋಗಿತ ಬಿನ್ ಸತೀಶ್ ಅವರಿಗೆ ಶೆಟ್ಟಿಹಳ್ಳಿ ಎಸ್.ಪಿ. ಗೋಪಾಲಕೃಷ್ಣ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್.ಜಿ ಪ್ರಸನ್ನಕುಮಾರ್ ಎಂ.ಎಚ್. ಜಗದೀಶ್, ಡಾ ಎಂ.ಎಲ್ ರಾಮಚಂದ್ರ ನಂಜುಂಡಸ್ವಾಮಿ, ಎಂ.ದೇವರಾಜು, ರಮೇಶ್‌ಗೌಡ, ಸುದರ್ಶನ್ ವಾಸು, ನಾರಾಯಣ, ಜಿ.ಎಂ. ರವೀಂದ್ರ, ರಾಜು, ಲಿಂಗರಾಜಯ್ಯ ಸಿ.ಪಿ. ಪ್ರಾಣೇಶ, ರವಿರಾಜ್, ಸಿ.ಎಲ್. ನಾಗರಾಜ್, ಸುರೇಶ್, ಸಿ.ಪಿ.ಗಂಗಾಧರೇಶ್ವರ, ಯಶೋದಮ್ಮ, ಸಂದ್ಯಾ ಸರಸ್ವತಿ ಇತರರು ಇದ್ದರು.