-ತಾಲೂಕು ಆಡಳಿತ ಸೌಧದಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ
-----ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ದುರಸ್ತಿ ಇಲ್ಲದೆ ಸೊರಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹೊಣೆ ಹೊತ್ತವರ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ ಗೆ ಶಿಫಾರಸ್ಸು ಮಾಡುವಂತೆ ಶಾಸಕ ಎನ್.ವೈ.ಗೋಪಾಲಕೃಷ್ಣ ತಾಕೀತು ಮಾಡಿದರು.ತಾಲೂಕು ಆಡಳಿತ ಸೌಧದಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಲಜೀವನ ಮಿಶನ್ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ತುಂಗಾಭದ್ರಾ ಕುಡಿವ ನೀರಿನ ಯೋಜನೆ ಕೊನೆಯ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಜತಗೆ ಶುದ್ಧ ಕುಡಿವ ನೀರಿನ ಘಟಕಗಳು ಇದ್ದರೂ ಕೆಲವೆಡೆ ಕೆಟ್ಟು ವರ್ಷಗಳೇ ಕಳೆದಿವೆ. ದುರಸ್ತಿಗೊಳಿಸುವಂತೆ ಅನೇಕ ಬಾರಿ ಪತ್ರ ಬರೆದರೂ ಸೂಕ್ತ ಸ್ಪಂದನೆ ಇಲ್ಲದಾಗಿದೆ ಎಂದು ನೀರು ಸರಬರಾಜು ಇಲಾಖೆಯ ಎಇಇ ಹರ್ಷ ಸಭೆಯಲ್ಲಿ ತಿಳಿಸಿದಾಗ, ಪ್ರತಿಕ್ರಿಯಿಸಿದ ಶಾಸಕ ಏನ್ ವೈ ಜಿ ತಾಲೂಕಿನಲ್ಲಿ ಎಷ್ಟು ಘಟಕಗಳು ಕೆಟ್ಟು ನಿಂತಿವೆ. ದುರಸ್ತಿ ಹೊಣೆ ಹೊತ್ತವರು ಯಾಕೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂಬುದನ್ನು ಪರಿಶೀಲಿಸಿ ಅಂತ ಏಜೆನ್ಸಿ ಯವರನ್ನು ಬ್ಲಾಕ್ ಲೀಸ್ಟ್ ಗೆ ಶಿಫಾರಸ್ಸು ಮಾಡುವಂತೆ ಸೂಚಿಸಿದರು.2024 ನೇ ಸಾಲಿನ ಶಾಸಕರ ಅನುದಾನದಲ್ಲಿ ಶೇ 60 ರಷ್ಟು ಅನುದಾನವನ್ನು ಶಾಲಾ ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿಗೆ ನೀಡಿದ್ದೇನೆ ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲದೇವಿ ಅವರನ್ನು ಪ್ರಶ್ನಿಸಿದಾಗ ವಿವಿಧ ಶಾಲಾ ಕೊಠಡಿಗಳ ದುರಸ್ತಿಗೆ ಸಂಬಂಧಿಸಿದಂತೆ ಈಗಾಗಲೇ 60 ಲಕ್ಷ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳಿಸಲಾಗಿದೆ.ಮಂಜೂರಾತಿ ಸಿಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಯಲ್ಲಿ ತಿಳಿಸಿದಾಗ ಶೀಘ್ರ ಮಂಜೂರಾತಿಗೆ ಅಧಿಕಾರಿಗಳಿಗೆ ಒತ್ತಡ ಹಾಕಬೇಕು.ವಿಳಂಬ ಸಲ್ಲದು ಎಂದರು.
ತಾಲೂಕಿನಲ್ಲಿ ತಿಂಡಿ ಹಾಗೂ ಟೀ ಹೋಟೆಲ್ ಗಳಲ್ಲಿ ಸ್ವಚ್ಚತೆ ಇಲ್ಲದಾಗಿದೆ. ತೊಳೆದ ನೀರಿನಲ್ಲಿಯೇ ಮತ್ತೊಮ್ಮೆ ತಟ್ಟೆ ಲೋಟ ತೊಳೆದು ಗ್ರಾಹಕರಿಗೆ ನೀಡುವುದು ಗಮನಿಸಿದ್ದೇವೆ. ಈ ಸಂಬಂಧವಾಗಿ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದಾಗ ತಾಲೂಕು ಆರೋಗ್ಯಾಧಿಕಾರಿ ಡಾ.ಮದುಕುಮಾರ್ ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆಯ ತಂಡ ತಾಲೂಕಿನ ಎಲ್ಲಾ ತಳ್ಳು ಗಾಡಿ, ಹೋಟೆಲ್ ಗಳಿಗೆ ಭೇಟಿ ನೀಡಿ ಸ್ವಚ್ಚತೆ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಕೆಲ ಹೋಟೆಲ್ ಗಳಿಗೆ ನೋಟಿಸ್ ನೀಡಲಾಗಿದೆ. ತಟ್ಟೆ, ಲೋಟ ಸ್ವಚ್ಚತೆ ಕಪ್ಪಡಿಕೊಳ್ಳುವುದು ಸೇರಿದಂತೆ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಸದಂತೆ ಸೂಚಿಸಲಾಗಿದೆ. ಸ್ವಚ್ಚತೆ ಕಾಪಾಡದ ಹೋಟೆಲ್ ಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಇದಕ್ಕೆ ತಾಲೂಕು ಪಂಚಾಯಿತಿ ಇ.ಒ ಹನುಮಂತಪ್ಪ ದ್ವನಿಗೂಡಿಸಿ ಮತ್ತೊಮ್ಮೆ ಭೇಟಿ ನೀಡಿ, ಸ್ವಚ್ಛತೆಯಿಲ್ಲದ ಹೋಟೆಲ್ ಗಳ ಮೇಲೆ ಕ್ರಮ ವಹಿಸುವಂತೆ ತಿಳಿಸಿದರು. ಸರ್ಕಾರದ ಅನುದಾಗಳು ಇದ್ದರೂ ಸಕಾಲಕ್ಕೆ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಅಧಿಕಾರಿಗಳು ಬದ್ಧತೆಯಿಂದ ಸೇವೆ ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಿದರು.......ಬಾಕ್ಸ್-1......
ದಸರಾ ನಂತರ 3 ಕೋಟಿ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಎನ್.ವೈಗೋಪಾಲಕೃಷ್ಣ ಹೇಳಿದರು. ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆನ್ನುವುದು ಬಹುದಿನದ ಬೇಡಿಕೆಯಾಗಿತ್ತು. ಭವನ ನಿರ್ಮಾಣಕ್ಕೆ ಜಾಗದ ಕೊರತೆಯು ಎದುರಾಗಿತ್ತು. ಹಾನಗಲ್ ರಸ್ತೆಯಲ್ಲಿ ಈಗಾಗಲೇ 1.30 ಎಕರೆ ಜಮೀನು ಮಂಜೂರಾಗಿದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ 3 ಕೋಟಿ ಅನುದಾದಲ್ಲಿ ಭವನ ನಿರ್ಮಾಣ ಮಾಡಲಾಗುವುದು. ಪಕ್ಷ ಬೇದ ಇಲ್ಲದೆ ದಲಿತ ಸಮುದಾಯದ ಮುಖಂಡರು ಸಹಕಾರದೊಂದಿಗೆ ಹಬ್ಬದ ನಂತರ ಶಂಕುಸ್ಥಾಪನೆಗೆ ಕ್ರಮ ವಹಿಸಲಾಗುವುದು. ಹಾಗೂ ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶ ವ್ಯಾಪ್ತಿಯ ನೆರ್ಲಯೂಟೆಯಲ್ಲಿ 3.50 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಈಗಾಗಲೇ ಡಿ ಪಿ ಆರ್ ಮಾಡಲಾಗಿದೆ. ಇದರಿಂದ ಜನತೆಗೆ ನೀರಿನ ಸಮಸ್ಯೆ ನೀಗುವುದಲ್ಲದೆ ಅಂತರ್ಜಲ ಅಭಿವೃದ್ಧಿಗೆ ಸಹಕಾರಿ ಎಂದರು.
.....ಬಾಕ್ಷ್-2....ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು 11 ಗಂಟೆಗೆ ನಿಗದಿಯಾಗಿತ್ತಾದರೂ ಒಂದು ಗಂಟೆ ತಡವಾಗಿ ಆರಂಭವಾಯಿತು. ಕೆಲ ಇಲಾಖೆ ಅಧಿಕಾರಿಗಳು ಮತ್ತು ಕೆಡಿಪಿ ನಾಮನಿರ್ದೇಶಿತ ಸದಸ್ಯರು ಸಭೆಯ ಅಂತ್ಯದವರೆಗೂ ತುಟಿ ಬಿಚ್ಚಲಿಲ್ಲ. ಮೂರು ಗಂಟೆಗಳ ಕಾಲ ನಡೆದ ಸಭೆಯು ನೀರಸ ಎಂಬಂತೆ ಕಂಡು ಬಂತು. ಸಭೆಯ ಅಂತ್ಯದಲ್ಲಿ ಅಂಬೇಡ್ಕರ್ ಭವನ ಹಾಗೂ ನೆರ್ಲೂಟಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ್ದು ಗಮನಾರ್ಹವಾಗಿ ಕಂಡು ಬಂತು.
ಈ ವೇಳೆ ತಹಸೀಲ್ದಾರ್ ಜಗದೀಶ್ ತಾ.ಪಂ ಇ.ಒ ಪ್ರಕಾಶ್, ಕೆಡಿಪಿ ಸದಸ್ಯರಾದ ವೀರೇಶ್ ಐಯ್ಯಣ್ಣ ಇದ್ದರು.