ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಡಹಬ್ಬವು ನಮ್ಮ ಮನಗಳ ಹಬ್ಬ, ಮನೆಗಳ ಹಬ್ಬ, ಅದನ್ನು ವೈಯಕ್ತಿಕವಾಗಿ ಸಂಭ್ರಮಿಸುತ್ತೇವೆ. ಆದರೆ ಸತ್ತ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮಾದರಿಯ ಹೋರಾಟ ಹಮ್ಮಿಕೊಂಡಿದ್ದು, ವಿವಿಧ ಸಂಘಟನೆಗಳ ಹಾಗೂ ರಾಜ್ಯ ರೈತ ಸಂಘದ ಸಹಸ್ರಾರು ರೈತರನ್ನು ಸೇರಿಸಿ ಪ್ರತಿಭಟಿಸಲಿದ್ದೇವೆ ಎಂದು ತಿಳಿಸಿದರು.
ರಾಮನಗರದ ರೈತರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಮತ್ತು ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಿಷೇಧಿಸಿ ಸಂವಿಧಾನ ಬಾಹಿರವಾಗಿ ಹೊರಡಿಸಿದ್ದ 144 ಸೆಕ್ಷನ್ ತೆರವಿಗೆ ಆಗ್ರಹಿಸಿ ಕಳೆದ ತಿಂಗಳು ರೈತಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮುಷ್ಕರ ನಡೆಸಲಾಗಿತ್ತು ಎಂದರು.ಈ ಬಗ್ಗೆ ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನೂ ಸಹ ಸಂಪರ್ಕಿಸಿ ಬೇಡಿಕೆ ಈಡೇರಿಸಲು ಕೋರಲಾಗಿತ್ತು. ಆದರೆ, 15 ದಿನಗಳ ಕಾಲಾವಕಾಶ ಕೋರಿದ್ದ ಉಸ್ತುವಾರಿ ಸಚಿವರು ನಮ್ಮ ಹೋರಾಟವನ್ನು ಕಡೆಗಣಿಸಿರುವುದರಿಂದ ಪ್ರೊ. ನಂಜುಂಡಸ್ವಾಮಿಯವರ ಮಾದರಿಯಂತೆ ಸರ್ಕಾರಕ್ಕೆ ಚಾಟಿ ಬೀಸುವ ಸಲುವಾಗಿ ನಾಡಹಬ್ಬ ವಿಜಯದಶಮಿಯಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಯ್ಯ ಹೇಳಿದರು.
ಸಮಸ್ಯೆಗಳನ್ನು ಆಲಿಸದೆ ನಿಷೇಧಾಜ್ಞೆ ಹೇರಿ ನಮ್ಮ ನಿಮ್ಮ ನಡುವೆ ಅಂತರವಿರಲಿ ಎಂಬ ಹಂಬಲದ ಅಸಮರ್ಥ ಜಿಲ್ಲಾಧಿಕಾರಿಯಿಂದ ಜಿಲ್ಲೆಯ ಪ್ರಗತಿ ಸಂಪೂರ್ಣ ಹಿಂದುಳಿಯುವ ಸಾಧ್ಯತೆ ಹೆಚ್ಚಾಗಿದೆ. ರೈತರ ಅಹವಾಲು ಆಲಿಸದ ಜಿಲ್ಲಾಧಿಕಾರಿ ಅಧಿಕಾರ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.
ರಾಜ್ಯ ರೈತಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರೈತರ ಚಳುವಳಿಗಳನ್ನು ಜಿಲ್ಲಾಧಿಕಾರಿಗಳು ನಿರ್ಲಕ್ಷಿಸುತ್ತ ಬಂದಿದ್ದು ಅವರಿಗೆ ಸಂವಿಧಾನದ ಅರಿವಿಲ್ಲ ಎನಿಸುತ್ತದೆ. ಇಂತಹ ಜಿಲ್ಲಾಧಿಕಾರಿ ನಮಗೆ ಅಗತ್ಯವಿಲ್ಲ ಎಂದರು.