ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಾದಿಗ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿರುವ ಕ್ರಮವನ್ನು ರಾಜ್ಯದ ಮಾದಿಗ ಸಮಾಜ ಮತ್ತು ಜಿಲ್ಲಾ ಡಾ.ಬಾಬು ಜಗಜೀವನರಾಮ್ ಯುವ ಜಾಗೃತಿ ವೇದಿಕೆ ಸ್ವಾಗತಿಸುತ್ತಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾದಿಗ ಸಮಾಜ ಆರ್ಥಿಕ, ಸಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ, ಔದ್ಯೋಗಿಕವಾಗಿ ತೀರ ಹಿಂದುಳಿದಿದ್ದು, ಅತ್ಯಂತ ಕನಿಷ್ಠ ಜೀವನ ಸಾಗಿಸುತ್ತಿದೆ. ಎಲ್ಲಾ ಹಂತದಲ್ಲಿಯೂ ಸರ್ಕಾರದ ಸವಲತ್ತು ವಂಚಿತವಾಗಿರುತ್ತದೆ. ಈ ಅಸಮಾನತೆಯ ವಿರುದ್ಧ ಕಳೆದ ೩೦ ವರ್ಷಗಳಿಂದ ಅನೇಕ ಹೋರಾಟ ಮಾಡಿಕೊಂಡು ಬರಲಾಗಿದೆ ಎಂದರು.
ಮಾದಿಗರ ಮತ ಸೆಳೆಯುವ ತಂತ್ರ: ಹಿಂದಿನ ಬಿಜೆಪಿ ಸರ್ಕಾರ ಕಳೆದ ವರ್ಷ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುದಾಗಿ ಹೇಳಿ ಎಸ್‌ಸಿ ಶೇ. ೧೭ ರಷ್ಠು, ಎಸ್‌ಟಿಗೆ ಶೇ. ೭ ರಷ್ಠು ಮೀಸಲಾತಿ ಹೆಚ್ಚು ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಪ್ರಚಾರಗಿಟ್ಟಿಸಿಕೊಳ್ಳುತ್ತೇ ಹೊರತು ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಈಗ ಒಳ ಮೀಸಲಾತಿ ಜಾರಿ ಮಾಡುವುದಾಗಿ ಉಪ ಸಮಿತಿ ರಚಿಸಿದ್ದಾರೆ. ಇದರ ಬದಲು ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಲೋಕಸಭೆ ಅಧಿವೇಶನದಲ್ಲಿ ಚರ್ಚೆಗೆ ತಂದು ಆರ್ಟಿಕಲ್ ೩೪೧ ತಿದ್ದುಪಡಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸಬಹುದು. ಉಪ ಸಮಿತಿ ನೆಪಹೇಳಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾದಿಗರ ಮತ ಸೆಳೆಯುವ ತಂತ್ರವಾಗಬಾರದು ಎಂದರು.ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ: ಕಾಂಗ್ರೆಸ್ ತನ್ನ ಚುನಾವಣಾ ಪ್ರಾಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟದಲ್ಲೇ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಲು ಕೇಂದ್ರ ಶಿಫಾರಸ್ಸು ಮಾಡುತ್ತೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್, ಕೆ.ಎಚ್.ಮುನಿಯಪ್ಪ ಅವರು ಘೋಷಣೆ ಮಾಡಿದರು ಅದರಂತೆ ಕಾಂಗ್ರೆಸ್ ಸರ್ಕಾರ ಪರಿಶಿಷ್ಠ ಜಾತಿಯ ಶೇ.೧೫ ರಷ್ಟು ಮೀಸಲಾತಿಯನ್ನು ೪ ಭಾಗಗಳಾಗಿ ವಿಂಗಡಿಸಿ ಜನಸಂಖ್ಯೆ ಆಧಾರದ ಮೇಲೆ ಎಡಗೈ ಸಮುದಾಯಕ್ಕೆ ಶೇ. ೬ ರಷ್ಟು, ಬಲಗೈ ಜನಾಂಗಕ್ಕೆ ಶೇ. ೫ ರಷ್ಟು, ಕೊರಚ, ಕೊರಮ, ಲಂಬಾಣಿ, ಭೋವಿ ಜನಾಂಗಕ್ಕೆ ಶೇ. ೩ ರಷ್ಟು, ಅಲೆಮಾರಿ ಜನಾಂಗಕ್ಕೆ ಶೇ. ೧ ರಷ್ಟು ಹೀಗೆ ಮೀಸಲಾತಿ ವರ್ಗೀಕರಿಸಿ ಪರಿಶಿಷ್ಠ ಜಾತಿ ೧೦೧ ಸಮುದಾಯಕ್ಕೂ ನ್ಯಾಯ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಶಾಸಕರುಗಳಿಗೂ ಮಾದಿಗ ಸಮಾಜ ಮತ್ತು ಜಿಲ್ಲಾ ಡಾ.ಬಾಬು ಜಗಜೀವನರಾಮ್ ಯುವ ಜಾಗೃತಿ ವೇದಿಕೆ ಸ್ವಾಗತಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುಂಡ್ಲುಪೇಟೆ ನಿಟ್ರೆ ಮಹದೇವಯ್ಯ, ಕೊಳ್ಳೇಗಾಲ ಬಿ.ಬಾಲರಾಜು, ಸಿ.ಸೋಮು, ರಾಚಪ್ಪಪಾಳ್ಯ, ಸೋಮಶೇಖರ್, ಗ್ರಾ.ಪಂ.ಸದಸ್ಯ ಗೋವಿಂದ ಹಾಜರಿದ್ದರು.