ಭಾಗ್ಯನಗರದಲ್ಲಿ ಪದವಿ ಕಾಲೇಜ್ ಪ್ರಾರಂಭಿಸಲು ಶಿಫಾರಸು

KannadaprabhaNewsNetwork |  
Published : Jun 25, 2025, 11:47 PM IST
564646 | Kannada Prabha

ಸಾರಾಂಶ

ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಪಿಯು ಕಾಲೇಜಿನಲ್ಲಿ ಕಟ್ಟಡ ಸುಸಜ್ಜಿತವಾಗಿದ್ದು, ಮೂಲಭೂತ ಸೌಕರ್ಯವಿದೆ. ಭಾಗ್ಯನಗರ ಉದ್ದಿಮೆ ಪಟ್ಟಣವಾಗಿದ್ದು ಬಿಎ, ಬಿಕಾಂ, ಮತ್ತು ಬಿಎಸ್ಸಿ ಕೋರ್ಸ್‌ ಪ್ರಾರಂಭಿಸಲು ಒಳ್ಳೆಯ ಶೈಕ್ಷಣಿಕ ವಾತಾವರಣ ಹೊಂದಿದೆ ಹಾಗೂ ಭವಿಷ್ಯದಲ್ಲಿ ಈ ಕಾಲೇಜಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುವ ನಿರೀಕ್ಷೆಗಳಿವೆ.

ಕೊಪ್ಪಳ:

ಭಾಗ್ಯನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾರಂಭಿಸಲು ಬೇಕಾದ ಮೂಲಸೌಕರ್ಯಗಳು ಲಭ್ಯವಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸಬಹುದು ಎಂದು ಶಿಫಾರಸು ಮಾಡಲಾಗಿದೆ.

ಈ ಕುರಿತು ನಾಗರಿಕರು ಸಲ್ಲಿಸಿದ್ದ ಮನವಿಯ ಹಿನ್ನೆಲೆ ಪದವಿ ಕಾಲೇಜು ಪ್ರಾರಂಭಿಸಲು ಬೇಕಾದ ಕನಿಷ್ಠ ಸೌಲಭ್ಯಗಳ ಲಭ್ಯತೆ ಕುರಿತು ಜೂ. 13ರಂದು ಕೊಪ್ಪಳದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಹನುಮಂತ ನಾಯಕ ದೊಡ್ಡಮನಿ ಹಾಗೂ ಉಪನ್ಯಾಸಕ ಶಿವನಾಥ್ ಇ.ಜಿ. ಅವರಿದ್ದ ನಿಯೋಗವು, ಉದ್ದೇಶಿತ ಸ್ಥಳವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತ್ತು.

ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಪಿಯು ಕಾಲೇಜಿನಲ್ಲಿ ಕಟ್ಟಡ ಸುಸಜ್ಜಿತವಾಗಿದ್ದು, ಮೂಲಭೂತ ಸೌಕರ್ಯವಿದೆ. ಭಾಗ್ಯನಗರ ಉದ್ದಿಮೆ ಪಟ್ಟಣವಾಗಿದ್ದು ಬಿಎ, ಬಿಕಾಂ, ಮತ್ತು ಬಿಎಸ್ಸಿ ಕೋರ್ಸ್‌ ಪ್ರಾರಂಭಿಸಲು ಒಳ್ಳೆಯ ಶೈಕ್ಷಣಿಕ ವಾತಾವರಣ ಹೊಂದಿದೆ ಹಾಗೂ ಭವಿಷ್ಯದಲ್ಲಿ ಈ ಕಾಲೇಜಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುವ ನಿರೀಕ್ಷೆಗಳಿವೆ. ಸ್ಥಳೀಯ ಶಾಸಕರು, ಶಿಕ್ಷಣ ಪ್ರೇಮಿಗಳು ಮತ್ತು ಸಾರ್ವಜನಿಕರ ಬೇಡಿಕೆ ಮೇರೆಗೆ ಪದವಿ ಕಾಲೇಜು ಪ್ರಾರಂಭಿಸಲು ಶಿಫಾರಸು ಮಾಡಲಾಗಿದೆ ಎಂದು ಜೂ. 17ರಂದು ಕಲಬುರಗಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ನಿಯೋಗವು ಪತ್ರ ಬರೆದಿದೆ.

ಮೊದಲ ವರ್ಷದಲ್ಲಿ ಬಿಎ, ಬಿಕಾಂ, ಮತ್ತು ಬಿಎಸ್ಸಿ ಕೋರ್ಸ್‌ ಪ್ರಾರಂಭಿಸಬಹುದಾಗಿದ್ದು, ಪ್ರಸ್ತಾವಿತ ಕಾಲೇಜಿಗೆ ಕಲಾ ವಿಭಾಗಕ್ಕೆ 500, ವಾಣಿಜ್ಯ ವಿಭಾಗಕ್ಕೆ 300 ಹಾಗೂ ವಿಜ್ಞಾನ ವಿಭಾಗಕ್ಕೆ 200 ವಿದ್ಯಾರ್ಥಿಗಳು ಲಭ್ಯವಾಗಲಿದ್ದಾರೆ. ಒಬ್ಬ ಪ್ರಾಂಶುಪಾಲರು, 8 ಬೋಧಕ ಸಿಬ್ಬಂದಿ ಹಾಗೂ 9 ಬೋಧಕೇತರ ಸಿಬ್ಬಂದಿ ನೇಮಕವಾಗಬೇಕು. ಕಾಲೇಜಿಗೆ ಸದ್ಯ ಸ್ವಂತ ಕಟ್ಟಡವಿದ್ದು, ವಾರ್ಷಿಕ ನಿರ್ವಹಣೆಗೆ ₹ 55 ಲಕ್ಷ ಹಾಗೂ ಇತರ ವೆಚ್ಚಗಳಿಗಾಗಿ ₹ 30 ಲಕ್ಷ ಅನುದಾನದ ಅವಶ್ಯಕತೆ ಇದೆ ಎಂದು ಶಿಫಾರಸಿನಲ್ಲಿ ವಿವರಿಸಲಾಗಿದೆ.

ಈ ಬೆಳವಣಿಗೆ ಕುರಿತು ಭಾಗ್ಯನಗರ ಸರ್ಕಾರಿ ಪದವಿ ಕಾಲೇಜ್ ಹೋರಾಟ ಸಮಿತಿ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಸಂಚಾಲಕ ಕೃಷ್ಣ ಇಟ್ಟಂಗಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ ಹಾಗೂ ಉಪಾಧ್ಯಕ್ಷ ಹೊನ್ನೂರಸಾಬ್ ಭೈರಾಪುರ ಸೇರಿದಂತೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಭಾಗ್ಯನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಸ್ಥಾಪನೆಗೆ ಬೇಕಾಗಿದ್ದ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಂತಾಗಿದ್ದು, ಜಂಟಿ ನಿರ್ದೇಶಕರಿಂದ ಶಿಫಾರಸಾಗಿ ಕಾಲೇಜು ಶಿಕ್ಷಣ ಇಲಾಖೆಗೆ ಹೋಗುವುದು ಬಾಕಿ ಇದೆ. ಆ ಹಂತದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆದಿಯಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಮನವೊಲಿಸಿ ಪದವಿ ಕಾಲೇಜನ್ನು ಇದೇ ವರ್ಷದಿಂದ ಪ್ರಾರಂಭಿಸಲು ಕ್ರಮಕೈಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ