ಆಳುವವರ ಇಚ್ಚಾಶಕ್ತಿಯ ಕೊರತೆ, ಅರಣ್ಯ ಹೋರಾಟಗಾರರ ನಡುವೆ ಸಮನ್ವಯದ ಕೊರತೆಯ ಕಾರಣ ರಾಜ್ಯದಲ್ಲಿ, ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರ ಸಮಸ್ಯೆ ಬಗೆಹರಿಯದೇ ನನೆಗುದಿಗೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ ಆಳುವವರ ಇಚ್ಚಾಶಕ್ತಿಯ ಕೊರತೆ, ಅರಣ್ಯ ಹೋರಾಟಗಾರರ ನಡುವೆ ಸಮನ್ವಯದ ಕೊರತೆಯ ಕಾರಣ ರಾಜ್ಯದಲ್ಲಿ, ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರ ಸಮಸ್ಯೆ ಬಗೆಹರಿಯದೇ ನನೆಗುದಿಗೆ ಬಿದ್ದಿದೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಡಾ. ನಾಗೇಶ ನಾಯ್ಕ ಕಾಗಾಲ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಅತಿಕ್ರಮಣದಾರರು ವಾಸ್ತವ್ಯ, ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ತಲಾತಲಾಂತರದಿಂದ ಜಿಲ್ಲೆಯಲ್ಲಿ ೮೨ ಸಾವಿರಕ್ಕೂ ಅಧಿಕ ಅರಣ್ಯವಾಸಿ ಕುಟುಂಬಗಳ ಭೂಹಕ್ಕು ಮಾನ್ಯಗೊಳಿಸುವ ಹಿನ್ನೆಲೆ ಈಗಾಗಲೇ ತಿರಸ್ಕೃತಗೊಂಡಿರುವ ಅರ್ಜಿಗಳ ಮರು ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆದರೆ ಮರುಪರಿಶೀಲನೆ ಪ್ರಕ್ರಿಯೆ ಕಾಟಾಚಾರಕ್ಕೆ ನಡೆಯುತ್ತಿದೆ ಎಂದು ದೂರಿದರು.ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಯ ಭಾಗವಾಗಿ ಜಂಟಿ ಮಹಜರು ಸಮಿತಿ ನೀಡುವ ವರದಿಯು ಭೂ ಹಕ್ಕು ಮಾನ್ಯಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಸಾಕ್ಷಿ ದಾಖಲೆಯಾಗಿ ಪರಿಗಣಿಸಲ್ಪಡುತ್ತದೆ. ಆದರೆ ನಿಯೋಜಿಸಲ್ಪಟ್ಟಿರುವ ಜಂಟಿ ಮಹಜರು ಸಮಿತಿಯು ಹಲವು ನ್ಯೂನ್ಯತೆಯಿಂದ ಕೂಡಿದೆ. ಅನುಸರಿಸುತ್ತಿರುವ ವಿಧಾನಗಳೂ ಸಹ ಅರಣ್ಯಹಕ್ಕು ಕಾಯ್ದೆ ಅಡಿಯಲ್ಲಿ ರಾಜ್ಯಮಟ್ಟದ ಉಸ್ತುವಾರಿ ಸಮಿತಿಯ ನಿರ್ದೇಶನಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಇದರಿಂದಾಗಿ ನ್ಯಾಯ ಸಿಗುವ ಕುರಿತು ಬಡ ಅರಣ್ಯ ವಾಸಿಗಳ ಆತಂಕಗೊಂಡಿದ್ದಾರೆ ಎಂದರು.ಮರುಪರಿಶೀಲನೆ ಪ್ರಕ್ರಿಯೆ ಶೀಘ್ರ ಪರಿಣಾಮಕಾರಿ ಅನುಷ್ಠಾನದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮಧ್ಯ ಪ್ರವೇಶಿಸಬೇಕು. ಜಿಲ್ಲಾಧಿಕಾರಿಗಳೊಂದಿಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಹಾಗೂ ಹೋರಾಟಗಾರರನ್ನು ಒಳಗೊಂಡು ಸಭೆ ಏರ್ಪಡಿಸಿ ಜಂಟಿ ಮರುಪರಿಶೀಲನಾ ಸಮಿತಿಯು ಅನುಸರಿಸಬೇಕಾದ ಸೂಕ್ತ ವ್ಯಾಖ್ಯಾನದೊಂದಿಗೆ, ನ್ಯಾಯಯುತ ವರದಿ ರೂಪುಗೊಂಡು, ಬಡ ಅತಿಕ್ರಮಣದಾರರ ಕುಟುಂಬಗಳು ವಂಚಿತವಾಗದಂತೆ ಜಾಗೃತಿ ವಹಿಸಬೇಕು. ತನ್ಮೂಲಕ ತಿರಸ್ಕೃತ ಅರ್ಜಿಗಳ ಮರುಪರಿಶೀಲನಾ ಆದೇಶವನ್ನು ಸಾಫಲ್ಯಗೊಳಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬೆನಿತ್ ಸಿದ್ದಿ, ಪ್ರಮುಖರಾದ ಗಿರೀಶ ನಾಯ್ಕ ಹೆಮ್ಮಾಡಿ, ಗಣೇಶ ಪಟಗಾರ, ಸಂತೋಷ ಬೋವಿವಡ್ಡರ್, ಶಿವಾನಂದ ನಾಯ್ಕ ಮದುರವಳ್ಳಿ, ಕರೀಂ ಸಾಬ ಬನವಾಸಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.