ಅಮ್ಮತ್ತೀರ ಐನ್ ಮನೆ ಪುನರ್ ನಿರ್ಮಾಣ: ಶಾಸಕ ಪೊನ್ನಣ್ಣ ಉದ್ಘಾಟನೆ

KannadaprabhaNewsNetwork |  
Published : Nov 16, 2026, 02:30 AM IST
ಚಿತ್ರ : 15ಎಂಡಿಕೆ1 : ಶಾಸಕ ಪೊನ್ನಣ್ಣ  ಮಾತನಾಡಿದರು.  | Kannada Prabha

ಸಾರಾಂಶ

ಪೊನ್ನಂಪೇಟೆ ತಾಲೂಕು ಬಾಡಗರ ಕೇರಿ ಗ್ರಾಮದ ಅಮ್ಮತ್ತೀರ ಕುಟುಂಬಸ್ಥರು ಪುನರ್ ನಿರ್ಮಿಸಿದ ಐನ್ ಮನೆಯನ್ನು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ಬಾಡಗರ ಕೇರಿ ಗ್ರಾಮದ ಅಮ್ಮತ್ತೀರ ಕುಟುಂಬಸ್ಥರು ಪುನರ್ ನಿರ್ಮಿಸಿದ ಐನ್ ಮನೆಯನ್ನು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ ಐನ್ ಮನೆ ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆ ಆಗಬೇಕು. ಐನ್ ಮನೆಗಳನ್ನು ಸೂರ್ಯ ಚಂದ್ರ ಇರುವವರೆಗೆ ಶಾಶ್ವತವಾಗಿರಲು ಇದೀಗ ಎಲ್ಲ ಭಾಗದಲ್ಲಿ ಐನ್ ಮನೆಗಳ ಮಹತ್ವ ಅರಿತು ಅವುಗಳ ಅಭಿವೃದ್ಧಿ ಪಡಿಸುವ ಕೆಲಸ ಆಗುತ್ತಿದೆ. ಹಾಗೆಯೇ ಅಮ್ಮತ್ತೀರ ಕುಟುಂಬಸ್ಥರು ಸಹ ಐನ್ ಮನೆಯನ್ನು ಪುನರ್ ನಿರ್ಮಾಣ ಮಾಡಿರುವುದು ತುಂಬಾ ಸಂತೋಷದ ವಿಚಾರ ಎಂದು ಹೇಳಿದರು.

ಕೊಡವ ಭಾಷಿಕ ಸಮಾಜದ 21 ಜನಾಂಗಗಳಲ್ಲಿ ಕನಿಷ್ಠ ಜನಸಂಖ್ಯೆಯ ಸಮುದಾಯವೇ ಇರಲಿ ಅಥವಾ ಹೆಚ್ಚಿನ ಜನಸಂಖ್ಯೆಯ ಸಮುದಾಯವೇ ಇರಲಿ ಯಾವುದೇ ತಾರತಮ್ಯ ಮಾಡದೇ ವಿಶೇಷವಾಗಿ ಪರಿಗಣಿಸಿ ಜನಾಂಗದ ಸಮುದಾಯ ಭವನ, ಐನ್ ಮನೆಗಳಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತ ಬರಲಾಗುತ್ತಿದೆ ಎಂದು ಹೇಳಿದ ಅವರು ಈ ನಾಡನ್ನು ಉಳಿಸಲು ಎಲ್ಲರೂ ಅಭಿಮಾನದಿಂದ ಒಗ್ಗಟ್ಟಾಗಿ ಸೇವೆ ಸಲ್ಲಿಸಬೇಕು. ಜನರನ್ನು ವಿಭಜಿಸಿ ನಾಡನ್ನು ಹಾಗೂ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿ ಆಚರಣೆ ಪದ್ಧತಿ ಪರಂಪರೆಯನ್ನು ಉಳಿಸಲು ಸಂಸ್ಕೃತಿಯ ಮೇಲೆ ಅಭಿಮಾನವಿರಬೇಕು. ಇನ್ನೊಬ್ಬರನ್ನು ದ್ವೇಷ ಮಾಡುವ ಮನೋಭಾವವಿರಿಸಿಕೊಳ್ಳದೇ ಎಲ್ಲರ ಜೊತೆ ಬಾಳುವುದನ್ನು ನಾವು ಕಲಿಯಬೇಕು ಎಂದು ಅವರು ಹೇಳಿದರು.

ಗೋಣಿಕೊಪ್ಪದಲ್ಲಿರುವ ಅಮ್ಮ ಕೊಡವ ಸಮಾಜದ ಕಟ್ಟಡ ಪ್ರವಾಹದಿಂದ ಕುಸಿಯುವ ಆತಂಕದಿಂದ ಅದರ ಸಂರಕ್ಷಣೆ ಮಾಡಲು ಎರಡು ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸಮಾಜದ ಅಭಿವೃದ್ಧಿಗೂ 25 ಲಕ್ಷ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಅವರು ಮಾತನಾಡಿ, ಕೊಡವ, ಕೊಡವ ಭಾಷಿಕ ಜನಾಂಗದ ಐನ್ ಮನೆ, ಗುರುಮನೆ, ಕಾರೋಣ ಮನೆ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಶಾಸಕ ಪೊನ್ನಣ್ಣ ಅವರು ಅನುದಾನ ನೀಡುತ್ತಾ ಬಂದಿದ್ದಾರೆ. ಇದರಿಂದ ಬಹಳಷ್ಟು ಐನ್ ಮನೆಗಳ ದುರಸ್ತಿ ಕೆಲಸ ಆಗುತ್ತಿದೆ. ಐನ್ ಮನೆ ಅಭಿವೃದ್ಧಿಗೆ ಇದುವರೆಗೆ ಯಾರು ಗಮನ ಹರಿಸಲಿಲ್ಲ. ಆದರೆ ಶಾಸಕ ಪೊನ್ನಣ್ಣ ಅವರು ಐನ್ ಮನೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗುವ ಮೂಲಕ ಒಂದು ಸಂಸ್ಕೃತಿಯ ಉಳಿಕೆ ಸಾಧ್ಯವಾಗುತ್ತದೆ ಎಂದು ಶ್ಲಾಘಿಸಿದರು.

ಕುಟುಂಬದ ಉಪಾಧ್ಯಕ್ಷೆ ರೇವತಿ ಪರಮೇಶ್ವರ ಅವರು ಮಾತನಾಡಿ, ಶಾಸಕ ಪೊನ್ನಣ್ಣ ಅವರು ನಮ್ಮ ಐನ್ ಮನೆಗೆ 4 ಲಕ್ಷ ಅನುದಾನದಿಂದ ಐನ್ ಪುನರ್ ನಿರ್ಮಿಸಲು ಅನುಕೂಲವಾಗಿದೆ. ಐನ್ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ ಮಾಡಿದರು.

ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಹಾಗೂ ತಲಕಾವೇರಿ ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರತ್ಯು, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಅಮ್ಮತ್ತೀರ ಕುಟುಂಬದ ಅಧ್ಯಕ್ಷ ಅಶೋಕ, ಉಪಾಧ್ಯಕ್ಷ ರೇವತಿ ಪರಮೇಶ್ವರ, ಕಾರ್ಯದರ್ಶಿ ಸುನಿಲ್, ಸಹ ಕಾರ್ಯದರ್ಶಿ ವಾಸುವರ್ಮ, ಹಿರಿಯರಾದ ಕಾಳಮಯ್ಯ ಹಾಜರಿದ್ದರು. ಬಿಂಬಿಕಾ, ದೀಪಿಕಾ, ದಾನಿಕ ಪ್ರಾರ್ಥಿಸಿ, ರೇವತಿ ಪರಮೇಶ್ವರ ಸ್ವಾಗತಿಸಿ, ತನು ದಿನೇಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌