ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬುಧವಾರ ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ತಾಲೂಕಿನ ಮಹಾಲಿಂಗಪುರ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಅದರಲ್ಲೂ ಸಾವಿರಾರು ಮಹಿಳೆಯರು ಬನಹಟ್ಟಿಯ ಎಸ್‌ಆರ್‌ಎ ಮೈದಾನದತ್ತ ಹರಿದು ಬರುತ್ತಿರುವುದು ಸಾಮಾನ್ಯವಾಗಿತ್ತು. ಹೋಳಿ ಹುಣ್ಣಿಮೆ ನಿಮಿತ್ತ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ನಡೆದ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಅಬ್ಬರದ ಸಂಗೀತಕ್ಕೆ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಬಣ್ಣದ ಮಳೆಯೇ ಸುರಿಯಿತು.ಈ ವೇಳೆ ಸಿದ್ದು ಕೊಣ್ಣೂರ ಮಾತನಾಡಿ, ಮಾನವ ದೇಹದ ಫಿಟ್‌ನೆಸ್‌ನಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿರ್ದಿಷ್ಟ ಬಣ್ಣದ ಕೊರತೆಯು ರೋಗಕ್ಕೆ ಕಾರಣವಾಗಬಹುದು, ಆದರೆ, ಆಹಾರ ಮತ್ತು ಔಷಧದ ಮೂಲಕ ಪೂರಕವಾಗಿದ್ದರೆ ಆ ಬಣ್ಣದ ಅಂಶವನ್ನು ಸರಿಪಡಿಸಬಹುದು. ಪ್ರಾಚೀನ ಕಾಲದಿಂದಲೂ ಹೋಳಿ ಹಬ್ಬ ಆಚರಣೆಯಲ್ಲಿದೆ. ನೈಸರ್ಗಿಕ ಮೂಲಗಳಾದ ಅರಿಶಿಣ, ಬೇವು, ತೇಸು ಇತ್ಯಾದಿಗಳಿಂದ ಬಣ್ಣ ತಯಾರಾಗುತ್ತದೆ. ಇದು ಒಂದು ಆರೋಗ್ಯಯುತ ಶರೀರ ಹೊಂದುವಲ್ಲಿನ ಗುಟ್ಟು ಎಂದರು.ರಬಕವಿ-ಬನಹಟ್ಟಿ, ರಾಂಪುರ, ಹೊಸೂರ, ಮಹಾಲಿಂಗಪುರ, ತೇರದಾಳ, ಜಗದಾಳ, ನಾವಲಗಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳ ಸಾವಿರಾರು ಯುವಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಿಂದ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಎರಡು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ, ಡಾ.ಎ.ಆರ್.ಬೆಳಗಲಿ, ಬಸವರಾಜ ಕೊಣ್ಣೂರ, ದೇವಲ ದೇಸಾಯಿ, ಟಿ.ವಿ.ಅರಳಿಕಟ್ಟಿ, ಸಂಗಮೇಶ ನಿರಾಣಿ, ಸಂಜೀವ ಜೋತಾವರ, ಗಜಾನನ ತೆಗ್ಗಿ, ನೀಲಕಂಠ ಮುತ್ತೂರ, ಬಲವಂತಗೌಡ ಪಾಟೀಲ, ಬಸವರಾಜ ರಾಯರ, ಯಲ್ಲನಗೌಡ ಪಾಟೀಲ, ಅರ್ಜುನ ದೊಡಮನಿ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಭೀಮಶಿ ಮಗದುಮ್, ರಾಜೇಂದ್ರ ಭದ್ರನ್ನವರ, ಮಲ್ಲಿಕಾರ್ಜುನ ಬಾಣಕಾರ, ಅಶೋಕ ಆಲಗೊಂಡ, ರಾಹುಲ ಕಲಾಲ, ಶಂಕರ ಕೆಸರಗೊಪ್ಪ ಸೇರಿದಂತೆ ಧುರೀಣರು ಪಾಲ್ಗೊಂಡಿದ್ದರು. ಬನಹಟ್ಟಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.