ಕೆಂಪು ಮತ್ತು ಕಪ್ಪು ಬಣ್ಣದ ಕೇಕ್ ತಯಾರಿಕೆ ಕೇಕ್ ಪಾಯಿಂಟ್ ಮಳಿಗೆಗೆ ಬೀಗ

KannadaprabhaNewsNetwork |  
Published : Oct 11, 2024, 11:48 PM IST
ನಗರದ ಬಿ.ಎಚ್‌ .ರಸ್ತೆಗೆ ಹೊಂದಿಕೊಂಡಂತಿರುವ ಕೇಕ್ ಪಾಯಿಂಟ್ ಬೇಕರಿಯಲ್ಲಿ ನಿಷೇಧಿತ ಕೇಕ್ ತಯಾರಿ ಪತ್ತೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ. | Kannada Prabha

ಸಾರಾಂಶ

ಕ್ಯಾನ್ಸರ್ ಕಾರಕ ಅಂಶವಿರುವ ಕೇಕ್ ತಯಾರಿ ಮತ್ತು ಮಾರಾಟ ಮಾಡದಂತೆ ಸರ್ಕಾರ ನಿಷೇಧ ಹೇರಿರುವ ಬೆನ್ನಲ್ಲೇ ಟಿಎಚ್‌ಒ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ.ತಿಮ್ಮರಾಜು ನೇತೃತ್ವದ ತಂಡ ನಗರದ ಆಯಕಟ್ಟಿನ ಬೇಕರಿಗಳಿಗೆ ಬುಧವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಕೆಂಪು ಮತ್ತು ಕಪ್ಪು ಬಣ್ಣದ ಕೇಕ್ ತಯಾರಿಸಿ ಮಾರಾಟಕ್ಕೆ ಇರಿಸಿದ್ದ ಕೇಕ್ ಪಾಯಿಂಟ್ ಮಳಿಗೆಗೆ ಬೀಗ ಜಡಿಯುವ ಮೂಲಕ ಸಿಬ್ಬಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕ್ಯಾನ್ಸರ್ ಕಾರಕ ಅಂಶವಿರುವ ಕೇಕ್ ತಯಾರಿ ಮತ್ತು ಮಾರಾಟ ಮಾಡದಂತೆ ಸರ್ಕಾರ ನಿಷೇಧ ಹೇರಿರುವ ಬೆನ್ನಲ್ಲೇ ಟಿಎಚ್‌ಒ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ.ತಿಮ್ಮರಾಜು ನೇತೃತ್ವದ ತಂಡ ನಗರದ ಆಯಕಟ್ಟಿನ ಬೇಕರಿಗಳಿಗೆ ಬುಧವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಕೆಂಪು ಮತ್ತು ಕಪ್ಪು ಬಣ್ಣದ ಕೇಕ್ ತಯಾರಿಸಿ ಮಾರಾಟಕ್ಕೆ ಇರಿಸಿದ್ದ ಕೇಕ್ ಪಾಯಿಂಟ್ ಮಳಿಗೆಗೆ ಬೀಗ ಜಡಿಯುವ ಮೂಲಕ ಸಿಬ್ಬಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.ತಾಲೂಕಿನಾದ್ಯಂತ ಅಂದಾಜು 450 ಬೇಕರಿಗಳಿದ್ದು ಶೇ.15ರಷ್ಟು ವರ್ತಕರು ಆಹಾರ ಸುರಕ್ಷತೆ ಪ್ರಮಾಣ ಪತ್ರ ಪಡೆದಿದ್ದಾರೆ. ಹಲವು ಬಾರಿ ನೋಟಿಸ್ ನೀಡಿದರೂ ಎಚ್ಚೆತ್ತು ಕೊಳ್ಳುತ್ತಿಲ್ಲ. ಕ್ಯಾನ್ಸರ್‌ ಕಾರಕ ಬೇಕರಿ ಉತ್ಪನ್ನಗಳ ಮಾರಾಟ ಮಾಡದಂತೆ ಆದೇಶವಿದ್ದರೂ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಆದ್ದರಿಂದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಮುಂದಾಗಿದ್ದೇವೆ. ಹತ್ತಾರು ವರ್ಷಗಳಿಂದ ಬೇಕರಿ ನಡೆಸುತ್ತಿರುವವರು ಕೂಡ ಪರವಾನಗಿ ಹಾಗೂ ಆಹಾರ ಸುರಕ್ಷತೆ ಪ್ರಮಾಣ ಪತ್ರ ಪಡೆದಿಲ್ಲ. ಸರ್ಕಾರದ ನಿರ್ದೇನದಂತೆ ತಪಾಸಣೆ ಚುರುಕುಗೊಳಿಸಿದ್ದು ಬೇಕರಿ ಮಾಲೀಕರು ಸಹಕಾರ ನೀಡಬೇಕು.ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ಡಾ.ತಿಮ್ಮರಾಜು ಖಡಕ್ ಸೂಚನೆ ನೀಡಿದರು.

ವರ್ತಕರಿಗೆ ಕೇವಲ ಲಾಭಗಳಿಸುವ ಉದ್ದೇಶವಿದ್ದರೆ ಸಾಲದು. ಬೇಕರಿ ತಿಂಡಿ, ತಿನಿಸು ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಬೇಕು. ನಿಮ್ಮಲ್ಲಿ ವಿಶ್ವಾಸವಿಟ್ಟು ಬರುವ ಗ್ರಾಹಕರ ಆರೋಗ್ಯ ರಕ್ಷಣೆ ಕಾಳಜಿಯಿರಬೇಕು ಎನ್ನುವ ಅಂಶ ಮನದಟ್ಟು ಮಾಡಿಕೊಳ್ಳಿ. ಹಣ್ಣಿನ ಜ್ಯೂಸ್, ತಂಪು ಪಾನೀಯ ಮಾರಾಟದ ಬಗ್ಗೆ ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.

ಎಪಿಎಂಸಿ ಮುಂಭಾಗದಲ್ಲಿ ನೂತನವಾಗಿ ಉದ್ಘಾಟನೆಯಾಗಿರುವ ಕೇಕ್ ವರ್ಡ್‌, ಶಂಭುಲಿಂಗೇಶ್ವರ, ಸ್ವಪ್ನ ಸ್ವೀಟ್ ಸ್ಟಾಲ್, ಕೇಕ್ ಪಾಯಿಂಟ್ ಸೇರಿದಂತೆ ಹಲವು ಬೇಕರಿಗಳಿಗೆ ಭೇಟಿ ನೀಡಿದ ವೇಳೆ ಯಾವುದೇ ರೀತಿಯ ಅನುಮತಿ ಪ್ರಮಾಣ ಪತ್ರ ಪಡೆಯದಿರುವುದು ಬೆಳಕಿಗೆ ಬಂದಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತಪಾಸಣೆಗೆ ಇಳಿಯುತ್ತಿದ್ದಂತೆ ಬೇಕರಿ ಮಾಲೀಕರು ಮತ್ತು ಸಿಬ್ಬಂದಿ ಒಂದಿಬ್ಬರು ಚುನಾಯಿತ ಜನಪ್ರತಿನಿಧಿಗಳಿಗೆ ಕರೆ ಮಾಡಿ ಕಾರ್ಯಚರಣೆ ಸ್ಥಗಿತಗೊಳಿಸುವಂತೆ ಒತ್ತಡ ಹೇರುತ್ತಿದ್ದ ದೃಶ್ಯ ಕಂಡುಬಂದಿತು. ಆದರೆ ಇದ್ಯಾವುಕ್ಕೂ ಸೊಪ್ಪು ಹಾಕದ ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಕಾರ್ಯಚರಣೆಯಲ್ಲಿ ಕಾರ್ತಿಕ್, ಸುಬ್ರಹ್ಮಣ್ಯ ಹಾಗೂ ಅಭಿಷೇಕ್‌ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!