ಪ್ರಸ್ತುತ ರೆಡ್‌ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರಗಳನ್ನು ಆಯೋಜಿಸುವುದು, ಪ್ರಥಮ ಚಿಕಿತ್ಸೆ ಕುರಿತಂತೆ ತರಬೇತಿ ನೀಡುವುದು, ತಾಯಿ-ಮಗುವಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಂತಹ ಸೇವಾ ಕಾರ್‍ಯದಲ್ಲಿ ನಿರತವಾಗಿದೆ. ಸಂಸ್ಥೆಯ ಸದಸ್ಯರಾಗ ಬಯಸುವವರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಾನವೀಯತೆಯನ್ನು ಜೀವಂತವಾಗಿಡಲು, ವಿಶ್ವದಾದ್ಯಂತ ಜೀವಗಳನ್ನು ಉಳಿಸಲು ನಿಸ್ವಾರ್ಥ ಸೇವೆ ಮಾಡುವ ಲಕ್ಷಾಂತರ ಸ್ವಯಂಸೇವಕರನ್ನು ರೆಡ್‌ಕ್ರಾಸ್ ಸಂಸ್ಥೆ ಹೊಂದಿದೆ ಎಂದು ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.
ನಗರದ ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜಿನ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜೂನಿಯರ್ ರೆಡ್‌ಕ್ರಾಸ್ ಘಟಕ, ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜು ವತಿಯಿಂದ ನಡೆದ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮಾನವ ನಾಗರಿಕತೆಯ ಇತಿಹಾಸದಲ್ಲಿ ವಿನಾಶ, ಯುದ್ಧ ಮತ್ತು ನೋವು ಮನುಷ್ಯನಿಗೆ ತನ್ನ ಮಿತಿಗಳನ್ನು ನೆನಪಿಸಿದ ಅನೇಕ ಕ್ಷಣಗಳಿವೆ. ಆದರೆ ಇಂತಹ ಕತ್ತಲೆಯ ಸಂದರ್ಭಗಳ ನಡುವೆಯೇ ಕರುಣೆ, ಸೇವೆ ಮತ್ತು ಸಹಬಾಳ್ವೆಯ ಜ್ಯೋತಿಯೂ ಬೆಳಗಿದೆ. ಇದು ಮಾನವಕುಲಕ್ಕೆ ಹೊಸ ದಿಕ್ಕನ್ನು ತೋರಿಸಿದೆ ಎಂದರು.
ವಿಶ್ವ ರೆಡ್ ಕ್ರಾಸ್ ದಿನ ಜ್ಯೋತಿಯ ಆಚರಣೆಯಾಗಿದೆ. ಇದು ಕೇವಲ ಸೇವೆ ಮತ್ತು ತ್ಯಾಗದ ಮೌಲ್ಯಗಳನ್ನು ಸ್ಮರಿಸುವ ದಿನವಲ್ಲ. ಬದಲಿಗೆ ಸಂಕಷ್ಟದ ಸಮಯದಲ್ಲಿ ಮನುಷ್ಯ ತನ್ನ ಸಂವೇದನಾಶೀಲತೆಯಿಂದ ಜಗತ್ತನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ತೋರಿಸುವ ದಿನವಾಗಿದೆ ಎಂದು ಹೇಳಿದರು.
ಪ್ರಸ್ತುತ ರೆಡ್‌ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರಗಳನ್ನು ಆಯೋಜಿಸುವುದು, ಪ್ರಥಮ ಚಿಕಿತ್ಸೆ ಕುರಿತಂತೆ ತರಬೇತಿ ನೀಡುವುದು, ತಾಯಿ-ಮಗುವಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಂತಹ ಸೇವಾ ಕಾರ್‍ಯದಲ್ಲಿ ನಿರತವಾಗಿದೆ. ಸಂಸ್ಥೆಯ ಸದಸ್ಯರಾಗ ಬಯಸುವವರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಶಾಲಾ ಹಂತದಲ್ಲಿ ಸದಸ್ಯರಾಗುವವರು ₹25 ನೀಡಿ ಸದಸ್ಯತ್ವ ಪಡೆದರೆ, ಕಾಲೇಜು ಹಂತದಲ್ಲಿ ₹1 ಸಾವಿರ ನೀಡಿ ಅಜೀವ ಸದಸ್ಯತ್ವ ಪಡೆದು ಆ ಮೂಲಕ ರೆಡ್‌ಕ್ರಾಸ್‌ನ ಸೇವಾ ಕಾರ್‍ಯಗಳಲ್ಲಿ ಭಾಗಿಯಾಗಬಹುದು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸದಸ್ಯರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ, ಮಾಜಿ ಕಾರ್‍ಯದರ್ಶಿ ಎಂ.ಬಿ.ರಮೇಶ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್, ರೆಡ್‌ಕ್ರಾಸ್ ಕಾರ್‍ಯದರ್ಶಿ ರಂಗಸ್ವಾಮಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.