ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಶಾಹಿ ಕಂಪನಿ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : May 09, 2026, 01:30 AM IST
8ಎಚ್ಎಸ್ಎನ್7 : ಗಾರ್ಮೆಂಟ್ಸ್‌ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ ಕಾರ್ಮಿಕರು.. | Kannada Prabha

ಸಾರಾಂಶ

ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಮರ್ಪಕ ವೇತನ ನೀಡದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿ, ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಕಂಪನಿ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು. ಬೆಳಗ್ಗೆ ಕಂಪನಿಗೆ ಕೆಲಸಕ್ಕೆ ಆಗಮಿಸಿದ ನೂರಾರು ಕಾರ್ಮಿಕರು ಏಕಾಏಕಿ ಕೆಲಸ ನಿಲ್ಲಿಸಿ, ಕಂಪನಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸಂಬಳ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಿಂದ ಕೆಲಕಾಲ ಕಂಪನಿಯ ಕಾರ್ಯಚಟುವಟಿಕೆ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಕನ್ನಡಪ್ರಭ ವಾರ್ತೆ ಹಾಸನ

ಸಂಬಳ ಹೆಚ್ಚಳ, ಹಾಜರಾತಿ ಬೋನಸ್ ಹಾಗೂ ಮೂಲಭೂತ ಕಾರ್ಮಿಕ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ನಗರದ ಹೊರವಲಯ ಹೊಳೆನರಸೀಪುರ ರಸ್ತೆಯಲ್ಲಿರುವ ಶಾಹಿ (ಎ.ಎಚ್.ಪಿ. ಅಪಾರಲ್ ಪ್ರೈವೇಟ್ ಲಿಮಿಟೆಡ್) ಗಾರ್ಮೆಂಟ್ಸ್‌ ಕಾರ್ಮಿಕರು ಶುಕ್ರವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಮರ್ಪಕ ವೇತನ ನೀಡದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿ, ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಕಂಪನಿ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು. ಬೆಳಗ್ಗೆ ಕಂಪನಿಗೆ ಕೆಲಸಕ್ಕೆ ಆಗಮಿಸಿದ ನೂರಾರು ಕಾರ್ಮಿಕರು ಏಕಾಏಕಿ ಕೆಲಸ ನಿಲ್ಲಿಸಿ, ಕಂಪನಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸಂಬಳ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಿಂದ ಕೆಲಕಾಲ ಕಂಪನಿಯ ಕಾರ್ಯಚಟುವಟಿಕೆ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಕಂಪನಿ ಕಾರ್ಮಿಕ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಈ ಕಂಪನಿಯಲ್ಲಿ ನೂರಾರು ಜನ ಕಾರ್ಮಿಕರು ದುಡಿಯುತ್ತಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಬಂದವರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಕಾರ್ಮಿಕರ ಶ್ರಮಕ್ಕೆ ತಕ್ಕ ಗೌರವ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಿಂದ ಸಂಬಳ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಈಗ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ₹೧೭ ಸಾವಿರವರೆಗೆ ಸಂಬಳ ನೀಡಲಾಗುತ್ತಿದೆ. ಆದರೆ ೫ರಿಂದ ೮ ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಳೆಯ ಕಾರ್ಮಿಕರಿಗೆ ಕೇವಲ ₹೧೨,೫೦೦ ರಿಂದ ₹೧೩ ಸಾವಿರ ಮಾತ್ರ ನೀಡಲಾಗುತ್ತಿದೆ. ಅನುಭವ ಹೊಂದಿದ ಕಾರ್ಮಿಕರನ್ನೇ ಕಡೆಗಣಿಸಲಾಗುತ್ತಿದೆ, ಇದರಿಂದ ನಮ್ಮ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂಪನಿಯಲ್ಲಿ ಕಾರ್ಮಿಕರಿಗೆ ಸರಿಯಾದ ತಿಂಡಿ- ಊಟದ ವ್ಯವಸ್ಥೆಯೇ ಇಲ್ಲ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಬೇಡಿಕೆಗಳ ಬಗ್ಗೆ ಪ್ರಶ್ನಿಸಿದರೆ ‘ಇಂದು, ನಾಳೆ ಮಾಡುತ್ತೇವೆ’ ಎಂದು ಹೇಳಿ ಕಾಲಹರಣ ಮಾಡುತ್ತಾರೆ. ಆದರೆ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಇನ್ನೂ ರಾತ್ರಿ ಪಾಳಿಯಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡಿದರೂ ಅಲ್ಪ ಪ್ರಮಾಣದ ಹಣ ಮಾತ್ರ ನೀಡಲಾಗುತ್ತಿದೆ ಎಂದು ದೂರಿದ ಅವರು, ಹೆಚ್ಚುವರಿ ಸಮಯ ದುಡಿದರೂ ಕೇವಲ ₹100 ನೀಡುತ್ತಾರೆ. ಹಾಜರಾತಿ ಬೋನಸ್ ನೀಡುವುದಾಗಿ ಹೇಳಿ ಇದುವರೆಗೂ ಕೊಟ್ಟಿಲ್ಲ. ಮ್ಯಾನೇಜ್ಮೆಂಟ್ ಹಾಗೂ ಮೇಲಾಧಿಕಾರಿಗಳಿಂದ ಆದೇಶ ಬರಬೇಕೆಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟಕ್ಕೆ ಇಳಿದಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.

ಮತ್ತೊಬ್ಬ ಕಾರ್ಮಿಕರಾದ ಜಯಮ್ಮ ಮಾತನಾಡಿ, ನಾನು ಕಳೆದ ಏಳು ವರ್ಷಗಳಿಂದ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ದಿನಕ್ಕೆ ₹೬೦೦ ನೀಡುತ್ತಿದ್ದರು. ಈಗ ಅದನ್ನು ಕಡಿಮೆ ಮಾಡಿ ಕೇವಲ ₹೪೦೦ ನೀಡುತ್ತಿದ್ದಾರೆ. ಕೆಲವೊಮ್ಮೆ ₹೩೦೦ ಮಾತ್ರ ಸಿಗುತ್ತದೆ. ಇಂತಹ ಕಡಿಮೆ ಸಂಬಳದಲ್ಲಿ ಮನೆ ನಡೆಸುವುದು ಅಸಾಧ್ಯವಾಗಿದೆ ಎಂದು ಕಣ್ಣೀರಿಟ್ಟರು.

ಕಾರ್ಮಿಕರ ಪ್ರಕಾರ, ಕಂಪನಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಯಾವುದೇ ವಿಶೇಷ ಸೌಲಭ್ಯ ಅಥವಾ ಪ್ರೋತ್ಸಾಹ ನೀಡಲಾಗುತ್ತಿಲ್ಲ. ವೇತನ ವ್ಯತ್ಯಾಸ, ಬೋನಸ್ ಸಮಸ್ಯೆ, ಹೆಚ್ಚುವರಿ ಕೆಲಸದ ಭತ್ಯೆ ಕೊರತೆ ಹಾಗೂ ಮೂಲಸೌಕರ್ಯಗಳ ಅಭಾವದಿಂದ ಕಾರ್ಮಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ ಎನ್ನಲಾಗಿದೆ. ಪ್ರತಿಭಟನೆ ನಡೆಯುತ್ತಿದ್ದಂತೆ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಮಾತುಕತೆ ನಡೆಸಲು ಪ್ರಯತ್ನಗಳು ನಡೆದವು. ಆದರೆ ಕಾರ್ಮಿಕರು ತಮ್ಮ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಾರ್ಮಿಕರಾದ ಗಣೇಶ್, ಮಧು, ಕುಮಾರ್, ಮಲ್ಲಿಕ್, ಗೌತಮ್, ಶಶಿಕಲಾ, ಮಂಜುಳಾ, ಭವ್ಯ, ಭಾಗ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳವಾಡಿಯಲ್ಲಿ ಅಂಬೇಡ್ಕರ್‌ ಪುತ್ಥಳಿ ಅನಾವರಣ
ಬೂವನಹಳ್ಳಿಯ ಜಾತ್ರಾ ಮಹೋತ್ಸವಕ್ಕೆ ಕುಮಾರಸ್ವಾಮಿ ಚಾಲನೆ