ವಿಶ್ವದಾದ್ಯಂತ ಮಾನವೀಯತೆ ಪಸರಿಸಿದ ರೆಡ್‌ಕ್ರಾಸ್ ಸಂಸ್ಥೆ: ಡಾ. ಮಂಜುನಾಥ

KannadaprabhaNewsNetwork | Published : May 9, 2024 1:06 AM

ಸಾರಾಂಶ

ಜಗತ್ತಿನಾದ್ಯಂತ ಮಾನವೀಯತೆಯನ್ನು ಪಸರಿಸಿದ ಕೀರ್ತಿ ರೆಡ್‌ಕ್ರಾಸ್ ಸಂಸ್ಥೆಗೆ ಸಲ್ಲುತ್ತದೆ.

ರೆಡ್‌ಕ್ರಾಸ್ ಸಂಸ್ಥೆಗೆ ನಿರ್ದೇಶಕ ಡಾ. ಮಂಜುನಾಥ ಹೇಳಿಕೆಕೊಪ್ಪಳದಲ್ಲಿ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆ, ರಕ್ತದಾನ ಶಿಬಿರಕನ್ನಡಪ್ರಭ ವಾರ್ತೆ ಕೊಪ್ಪಳ

ಜಗತ್ತಿನಾದ್ಯಂತ ಮಾನವೀಯತೆಯನ್ನು ಪಸರಿಸಿದ ಕೀರ್ತಿ ರೆಡ್‌ಕ್ರಾಸ್ ಸಂಸ್ಥೆಗೆ ಸಲ್ಲುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಹೇಳಿದ್ದಾರೆ.

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳದಲ್ಲಿ ರೆಡ್‌ಕ್ರಾಸ್ ಸಂಸ್ಥಾಪಕರಾದ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವ ರೆಡ್‌ಕ್ರಾಸ್ ದಿನ ಹಾಗೂ ಅಂತಾರಾಷ್ಟ್ರೀಯ ಥಲಸ್ಸೇಮಿಯಾ ದಿನವನ್ನು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರೋಗನಿದಾನ ಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜಿನ್ ಹೆನ್ರಿ ಡ್ಯೂನಾಂಟ್ ಅವರು ಯುದ್ಧದಲ್ಲಿ ಗಾಯಗೊಂಡವರನ್ನು ಉಪಚರಿಸಲು ಪ್ರಾರಂಭಿಸಿ, ಆನಂತರ ಅದನ್ನೇ ವಿಸ್ತಾರವಾಗಿ ಬೆಳೆಯುವಂತೆ ಮಾಡಿದರು. ಆ ಮೂಲಕ ರೆಡ್‌ಕ್ರಾಸ್ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಈಗ ಅದು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಮಾನವೀಯತೆಯನ್ನು ಜೀವಂತವಾಗಿರಿಸುವ ಕಾರ್ಯ ಮಾಡುತ್ತದೆ ಎಂದರು.

ರೆಡ್‌ಕ್ರಾಸ್ ಸಂಸ್ಥೆಯೊಂದು ಜಾತಿ, ಮತ, ಪಂಥಗಳು ಅಷ್ಟೇ ಅಲ್ಲ, ಗಡಿಗಳು ಎನ್ನುವ ಎಲ್ಲೆಯನ್ನು ಮೀರಿದ ರಾಜಕೀಯವಾಗಿ ತಟಸ್ಥ ಇರುವ ಸಂಸ್ಥೆಯಾಗಿದೆ. ಸಂಕಷ್ಟದಲ್ಲಿ ಇರುವವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಾಯ ಮಾಡುವ ಸಂಸ್ಥೆಯಾಗಿದೆ ಎಂದರು. ಇಂಥ ರೆಡ್‌ಕ್ರಾಸ್ ಸಂಸ್ಥೆಯ ದಿನಾಚರಣೆ ನಿಜಕ್ಕೂ ಶ್ಲಾಘನೀಯ ಎಂದರು.

ಥಲಸ್ಸೇಮಿಯಾ ರೋಗಿಗಳಿಗೆ ಪ್ರತಿ ತಿಂಗಳು ರಕ್ತದ ಅವಶ್ಯಕತೆ ಇರುವುದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಎಂದು ರಕ್ತದಾನಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಭಾವಚಿತ್ರಕ್ಕೆ ಥಲಸ್ಸೇಮಿಯಾದಿಂದ ಬಳಲುತ್ತಿರುವ ರೋಗಿ ಕುಮಾರ ಸಿದ್ಧಾರ್ಥ ಹಾಗೂ ಅತಿಥಿಗಳಿಂದ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಿಮ್ಸ್‌ ರೋಗನಿದಾನ ಶಾಸ್ತ್ರವಿಭಾಗದ ಮುಖ್ಯಸ್ಥ ಡಾ. ಅನಿರುದ್ಧ ವಿ. ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು.

ಸಹಪ್ರಾಧ್ಯಾಪಕರಾದ ಡಾ. ವಿನಯ, ಸಹಾಯಕ ಪ್ರಾಧ್ಯಾಪಕರಾದ ಡಾ. ಹೇಮಾವತಿ , ಡಾ. ಧನ್ಯ ಕೆ. ಹಾಗೂ ವೈದ್ಯವಿದ್ಯಾರ್ಥಿಗಳು ಮತ್ತು ಬಿಎಸ್‌ಸಿ ವಿದ್ಯಾರ್ಥಿಗಳು, ಸಿಬ್ಬಂದಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮಾನವೀಯತೆಯನ್ನು ಜೀವಂತವಾಗಿರಿಸಲು ಕೈಜೋಡಿಸಿದರು.

Share this article